ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ

ಭಾರತ ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಮೊದಲನೇ ಪಂದ್ಯಕ್ಕೆ ಭಾರತ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಸಾಕ್ಷಿಯಾದರು. ರಾಂಚಿಯವರಾದ ಧೋನಿ, ತಮ್ಮ ತವರಿನಲ್ಲಿ ನಡೆದ ಪಂದ್ಯವನ್ನು ನೋಡಲು ಕುಟುಂಬ ಸಮೇತ ಕ್ರೀಡಾಂಗಣಕ್ಕೆ ಹಾಜರಾಗಿದ್ದರು.

 

ಎಂಎಸ್‌ ಧೋನಿ ಕ್ರೀಡಾಂಗಣದಲ್ಲಿ ಹಾಜರಿರುವುದನ್ನು ಅರಿತ ಅಭಿಮಾನಿಗಳು “ಧೋನಿ ಧೋನಿ” ಎಂದು ಮೈದಾನದಲ್ಲಿ ಕೂಗುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದರು. ಪಂದ್ಯ ಮುಗಿದ ನಂತರ ಮಾತನಾಡಿದ ಜಿಮ್ಮಿ ನೀಶಮ್ ಎಂಎಸ್‌ ಧೋನಿ ಮೇಲೆ ರಾಂಚಿಯ ಜನತೆಯ ಅಭಿಮಾನದ ಬಗ್ಗೆ ಮಾತನಾಡಿದರು.

ಇಲ್ಲಿ ನಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ನೋಡಲು ಯಾರು ಬಂದಿಲ್ಲ, ಎಲ್ಲರೂ ಬಂದಿರುವುದು ಆತನಿಗಾಗಿ. ಅವರ ಮೇಲೆ ಜನ ಇಟ್ಟಿರುವ ಅಭಿಮಾನವನ್ನು ಮಾತಿನಲ್ಲಿ ಹೇಳಲಾಗದು. ಈ ರೀತಿ ಅಭಿಮಾನ ಸಂಪಾದಿಸುವುದು ನಿಜಕ್ಕೂ ಶ್ರೇಷ್ಠ ಎಂದರು.

“ನಾನು ಪ್ರಾಮಾಣಿಕವಾಗಿ ಇರಲು ಬಯಸುತ್ತೇನೆ, ಇಲ್ಲಿ ನಾವು ಆಡುವುದನ್ನು ನೋಡಲು ಯಾರು ಬಂದಿಲ್ಲ, ಎಲ್ಲರೂ ಬಂದಿರುವುದು ಆತನಿಗಾಗಿ. ನಿಜಕ್ಕೂ ಇದನ್ನು ನಾನು ಆನಂದಿಸಿದ್ದೇನೆ. ನಮ್ಮ ಮೇಲೆ ಯಾವುದೇ ಒತ್ತಡ ಇಲ್ಲದೆ ಆಡಿದೆವು” ಎಂದು ಪಂದ್ಯ ಮುಗಿದ ನಂತರ ಜಿಮ್ಮಿ ನೀಶಮ್ ಹೇಳಿದರು.

ಪಂದ್ಯವನ್ನು ವೀಕ್ಷಿಸಿದ ಧೋನಿ, ಸಾಕ್ಷಿ

ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯವನ್ನು ಸ್ಟಾಂಡ್‌ನಲ್ಲಿ ಎಂಎಸ್ ಧೋನಿ ಮತ್ತು ಸಾಕ್ಷಿ ವೀಕ್ಷಿಸಿದರು.

ಇವರಿಬ್ಬರು ಪಂದ್ಯವನ್ನು ವೀಕ್ಷಿಸುತ್ತಿರುವ ದೃಶ್ಯವನ್ನು ಸ್ಟೇಡಿಯಂನ ದೊಡ್ಡ ಪರದೆ ಮೇಲೆ ತೋರಿಸುತ್ತಿದ್ದಂತೆ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಕ್ರಿಕೆಟ್ ನೋಡಲು ಬಂದವರು ಧೋನಿ ಧೋನಿ ಎಂದು ಕೂಗಲು ಶುರು ಮಾಡಿದರು. ಧೋನಿ ಕೂಡ ಅಭಿಮಾನಿಗಳ ಕೈ ಬೀಸುವ ಮೂಲಕ ಪ್ರತಿಕ್ರಿಯೆ ನೀಡಿದರು.

ರಾಂಚಿಯ ಮೂಲದ ಧೋನಿ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ರಾಂಚಿಯಲ್ಲೇ ವಾಸವಾಗಿದ್ದಾರೆ. ಪಂದ್ಯಕ್ಕೂ ಮುನ್ನ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಧೋನಿ ಮನೆಗೆ ಭೇಟಿ ನೀಡಿದ್ದರು.

ಧೋನಿ ಸಲಹೆ ಪಡೆದ ವಾಷಿಂಗ್ಟನ್

ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಮಿಂಚು ಹರಿಸಿದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಧೋನಿ ಜೊತೆ ಮಾತನಾಡಿ, ಹಲವು ಸಲಹೆ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಸಿಎಸ್‌ಕೆ ತಂಡದ ಸಹ ಆಟಗಾರ ನ್ಯೂಜಿಲೆಂಡ್‌ನ ಡೆವೊನ್ ಕಾನ್ವೆ ಕೂಡ ಧೋನಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ ತಂಡ 21 ರನ್‌ಗಳ ಸೋಲನುಭವಿಸಿದೆ. ಏಕದಿನ ಸರಣಿಯನ್ನು ಕಳೆದುಕೊಂಡಿರುವ ನ್ಯೂಜಿಲೆಂಡ್ ಟಿ20 ಸರಣಿಯಲ್ಲಿ ಗೆದ್ದು ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿದೆ.

You May Also Like