ಅಕ್ರಮ ಗಣಿಗಾರಿಕೆ ಸಂಬಂಧ ರಾಜಣ್ಣ ಮತ್ತು ಶ್ರೀನಿವಾಸ ಎಂಬುವವರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಒಂದು ವರ್ಷ ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸಿ ತೀರ್ಪು
ದೇವರಾಯನದುರ್ಗ ನಾಮದ ಚಿಲುಮೆ ವ್ಯಾಪ್ತಿಯಲ್ಲಿ ಅನಧಿಕೃತ ಗಣಿಗಾರಿಕೆ ಸಂಬಂಧ ಭೂ ವಿಜ್ಞಾನಿ ಗಳು ದೂರಿನ ಮೇರೆಗೆ ಸ್ಥಳ ಪರಿಶೀಲನೆ ಮಾಡಿದ್ದು, ಮಣ್ಣು ಗಣಿಗಾರಿಕೆ ನಡೆಸಿ ಸಾಗಾಣಿಕೆ ಮಾಡಿ ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿಯ ಉಲ್ಲಂಘನೆ ಮಾಡಿದ್ದು, ಕೃಷಿಗಾಗಿ ಮಣ್ಣನ್ನು ಅನುಮತಿ ಇಲ್ಲದೆ ಬಳಸಿ ಕೊಂಡಿದ್ದು, ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿಯನ್ನು ಪಡೆಯದೆ ಗಣಿಗಾರಿಕೆ ನಡೆಸಿ ಮಣ್ಣನ್ನು ಸಾಗಾಣಿಕೆ ಮಾಡಿದ್ದು ಅಂದಾಜು ಸುಮಾರು 3375 ಮೆ.ಟನ್ ನಷ್ಟು ಸಾಗಾಣಿಕೆ ಮಾಡಿರುತ್ತಾರೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿಯವರಾದ ಶ್ರೀ ಸಂತೋಷಕುಮಾರ್. ಬಿ.ಸಿ.ಯವರು ಖಾಸಗಿ ದೂರನ್ನು ಸಲ್ಲಿಸಿರುತ್ತಾರೆ. ಪ್ರಕರಣವು ತುಮಕೂರಿನ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಗೀತಾ ಕೆ.ಬಿ. ಯವರು ಎಲ್ಲಾ ಸಾಕ್ಷಿದಾರರ ಹೇಳಿಕೆಗಳನ್ನು ಆಲಿಸಿ ಹಾಗು ವಾದ ವಿವಾದಗಳನ್ನು ಆಲಿಸಿ ದಿನಾಂಕ 2/2 /2023 ರಂದು ಆರೋಪಿತರಿಗೆ ಮಣ್ಣು ಗಣಿಗಾರಿಕೆ ಸಂಬಂಧ ಒಂದು ವರ್ಷ ಶಿಕ್ಷೆ ಮತ್ತು ಒಂದು ಲಕ್ಷ ದಂಡವನ್ನು ವಿಧಿಸಿ ಶಿಕ್ಷೆಯ ತೀರ್ಪು ನೀಡಿರುತ್ತಾರೆ.
ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಶ್ರೀ ಹಣಮಂತರಾಯ ತಳಕೇರಿ ಪಬ್ಲಿಕ್ ಪ್ರಾಸಿಕ್ಯೂಟರ್ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತುಮಕೂರು ಇವರು ತಮ್ಮ ವಾದವನ್ನು ಮಂಡಿಸಿರುತ್ತಾರೆ.