ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಎಂದು ಬರೆದ ನಿತ್ಯೋತ್ಸವ ಕವಿ ಎಂದೆ ಪ್ರಖ್ಯಾತಿ ಪಡೆದ ಕೆ. ಎಸ್. ನಿಸಾರ್ ಅಹಮದ್ ಅವರ ಜನ್ಮದಿನ
ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯಲ್ಲಿ 5/ 2 /1936ರಲ್ಲಿ ಕವಿ ಕೆ ಎಸ್ ನಿಸಾರ್ ಅಹಮದ್ ರವರು ಜನಿಸಿದರು. ಭೂ ವಿಜ್ಞಾನದ ಅಧ್ಯಾಪಕರಾಗಿ ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ 35 ವರ್ಷ ಸೇವೆ ಸಲ್ಲಿಸಿದರು. ಕನ್ನಡ ಕಾವ್ಯ ರಸಿಕರ ಅಪಾರ ಪ್ರೀತಿ ಅಭಿಮಾನ ಗಳಿಸಿದ ನಿಸಾರರು 84 ವರ್ಷಗಳ ತುಂಬು ಜೀವನವನ್ನು ನಡೆಸಿ 3/ 5 /2020 ರಂದು ನಮ್ಮನ್ನಗಲಿದರು.
ಇವರ ಮೊದಲ ಕವಿತೆ ಕುರಿಗಳು ಸಾರ್ ಕುರಿಗಳು ಸ್ವಂತಿಕೆಯನ್ನು ಕಳೆದುಕೊಂಡ ಸಾಮಾನ್ಯೀಕರಣ ರಾಜಕೀಯದ ವಿಡಂಬನೆಯಾಗಿದೆ. ಕವಿ ನಿಸಾರ್ ರವರ ಕಾವಿದ ತಾತ್ವಿಕತೆ ವಿಶಿಷ್ಟವಾಗಿದೆ. ಕಂಡಷ್ಟು ಸತ್ಯವಿರಬಹುದು ಆದರೆ ಕಂಡಷ್ಟೇ ಸತ್ಯವಲ್ಲ ಎಂದು ಅವರು ತಿಳಿದಿದ್ದಾರೆ. ತೀರ ಹೊಸದಾದ ತಿಳುವಳಿಕೆಯನ್ನು ಪಡೆಯುವುದೇ ಗುರಿ ಎಂದು ಅವರು ಭಾವಿಸಿಲ್ಲ . ಅತ್ಯುತ್ಸಾಹಿ ಕ್ರೀಡಾ ಕುಶಲಿಗೆ ವಿಕೆಟ್ಪು ನೀಗದೆ ಬಲು ಹೊತ್ತು ಕ್ರೀಡಾಂಗಣದಲ್ಲಿ ನೆಲೆ ನಿಲ್ಲುವುದು ಮುಖ್ಯವೆಂದು ಬುದ್ಧಿವಾದವನ್ನು ಹೇಳುತ್ತಾರೆ.
ಭಾರತೀಯ ಭಾಷೆಗಳಲ್ಲಿ ಮೊಟ್ಟಮೊದಲ ಭಾವಗೀತೆಗಳ ದ್ವನಿ ಸುರುಳಿ ಇವರ ನಿತ್ಯೋತ್ಸವ. ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ ಕನ್ನಡ ತಾಯಿಗೆ ನಿತ್ಯವೂ ಉತ್ಸವ ಎಂಬ ಕವಿಯ ಕಲ್ಪನೆಯೇ ನವೀನ. ಕನ್ನಡ ನವ್ಯ ಕಾವ್ಯದ ವಿಭಿನ್ನ ಮತ್ತು ಜನಪ್ರಿಯ ಮಾದರಿಯೊಂದನ್ನು ನಿರ್ಮಿಸಿದ ನಿಸಾರರು ವಿಶಿಷ್ಟಗೀತ ರಚನಾಕಾರರಾಗಿ ಮನ್ನಣೆ ಗಳಿಸಿದ್ದಾರೆ.