ರಾಷ್ಟ್ರ ಕವಿ ಜಿ ಎಸ್ ಎಸ್ ರವರ ಜನ್ಮ ದಿನ

ಬಹುಮುಖ ಪ್ರತಿಭೆಯ ಸಮನ್ವಯ ಕವಿ ಎನಿಸಿದ ಜಿ ಎಸ್ ಎಸ್ ರವರು ಶ್ರೇಷ್ಠ ಅಧ್ಯಾಪಕರು, ವಿಮರ್ಶಕರು, ಆಡಳಿತಗಾರರು, ಸಂಘಟಕರು ಆಗಿರುವಂತೆ ಶ್ರೇಷ್ಠ ಬರಹಗಾರರು ಆಗಿದ್ದರು.

ಕನ್ನಡದ ರಾಷ್ಟ್ರಕವಿಗಳಲ್ಲಿ ಒಬ್ಬರಾಗಿ, ವಿಮರ್ಶಕರು ಕವಿ ಎಂದು ಪ್ರಸಿದ್ಧರಾದ ಡಾ.ಜಿ.ಎಸ್. ಶಿವರುದ್ರಪ್ಪ ರವರು ಗುಗ್ಗುರಿ ಶಾಂತವೀರಪ್ಪ ಮತ್ತು ವೀರಮ್ಮ ನವರ ಪುತ್ರರಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ದಲ್ಲಿ 7/2/1926 ರಲ್ಲಿ ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ ಎಸ್ ಎಸ್ ರವರು ಎಸ್ ಎಸ್ ಎಲ್ ಸಿ  ಮುಗಿಯುತ್ತಿದ್ದಂತೆ ಸರಕಾರಿ ನೌಕರಿಯಲ್ಲಿ ದುಡಿಯಲಾರಂಭಿಸಿದರು. ಗುಬ್ಬಿ ತಾಲೂಕಿನ ಕಛೇರಿಯಲ್ಲಿ ಗುಮಾಸ್ತರಾಗಿ  ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಲು ಆರಂಭಿಸಿದರು. 1949ರಲ್ಲಿ ಬಿಎ ಪದವಿಯನ್ನು ಪಡೆದರು. 1953ರಲ್ಲಿ ಸ್ವರ್ಣ ಪದಕದೊಂದಿಗೆ ಎಂಎ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಮೈಸೂರಿನ ಯುವರಾಜ ಮಹಾರಾಜ ಕಾಲೇಜಿನಲ್ಲಿ ಮತ್ತು ಮಾನಸಗಂಗೋತ್ರಿಯಲ್ಲಿ ಅಧ್ಯಾಪಕರಾಗಿ 1963 ವರೆಗೆ ಸೇವೆ ಸಲ್ಲಿಸಿದರು. ನಂತರ ಹೈದರಾಬಾದ್ ಉಸ್ಮನಿಯ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ 1963 ರಿಂದ 1966 ರವರೆಗೆ ದುಡಿದರು.  1966 ರಿಂದ 1986 ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಇವರ ಸಾಹಿತ್ಯ ಕೃಷಿಗೆ ಹಲವಾರು ಪುರಸ್ಕಾರಗಳು ಲಭಿಸಿವೆ. ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ಕರ್ನಾಟಕ ರಾಜ್ಯ ಪುರಸ್ಕಾರ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ, ಮದರಾಸ್ ಕನ್ನಡಿಗರ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ, 1992ರಲ್ಲಿ ದಾವಣಗೆರೆಯಲ್ಲಿ ನಡೆದ 61ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ಸಾಹಿತ್ಯ ಅಧ್ಯಕ್ಷತೆ, ಪಂಪ ಪ್ರಶಸ್ತಿ, 2000 ರಲ್ಲಿ ರಾಷ್ಟ್ರಕವಿ ಗೌರವ, ಕುವೆಂಪು ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದರು. ಹೀಗೆ ಹಲವು ಪುರಸ್ಕಾರಗಳನ್ನು ಪಡೆದ ಇವರು ಕಾಣದ ಕಡಲಿಗೆ ಹಂಬಲಿಸಿದೆ ಮನ ಎಂದು ಬರೆದ ಇವರು ಡಿಸೆಂಬರ್ 23ರ 2013ರಲ್ಲಿ ತಮ್ಮ ಕಾವ್ಯ ರಚನೆಗೆ ಪೂರ್ಣವಿರಾಮವನ್ನು ಇಟ್ಟು ನಮ್ಮನ್ನಗಲಿದರು.

ಕವನ ಸಂಕಲನ

ಸಾಮಗಾನ ,ಚೆಲುವು ಒಲವು, ದೇವಶಿಲ್ಪ ,ಕಾರ್ತಿಕ ,ದೀಪದ ಹೆಜ್ಜೆ, ತೀರ್ಥ ವಾಣಿ ,ನನ್ನ ನಿನ್ನ ನಡುವೆ ,ಅನಾವರಣ ,ವ್ಯಕ್ತ ಮಧ್ಯ ಸೇರಿದಂತೆ ಹಲವಾರು ಕವನ ಸಂಕಲನಗಳ ಜೊತೆಗೆ ವಿಮರ್ಶಾ ಕೃತಿ , ಸಂಪಾದನಾ ಕೃತಿ ಮತ್ತು ಪ್ರವಾಸ ಕಥನಗಳನ್ನು ರಚಿಸಿದ್ದರು.

 

 

 

 

You May Also Like