ಜಿಲ್ಲಾ ಹಾಗೂ ತಾಲೂಕು ಬಾಲ ಭವನಗಳ ಉನ್ನತಿಕರಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ಬಾಲ ಭವನ ಸೊಸೈಟಿ ಅಧ್ಯಕ್ಷ ಎಂಎ ಪೂರ್ಣಿಮಾ ಪ್ರಕಾಶ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಬಾಲಭವನ ಪರಿಶೀಲನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಆರೋಗ್ಯ,ಶಿಕ್ಷಣ,ಮನರಂಜನೆ,ತಾರ್ಕಿಕ ಮನೋಭಾವನೆಯನ್ನು ಮಕ್ಕಳಲ್ಲಿ ಬೆಳೆಸಿ ಪೂರ್ಣ ವ್ಯಕ್ತಿತ್ವವನ್ನು ರೂಪಿಸುವ ಉದ್ದೇಶದಿಂದ ಬಾಲಭವನಗಳನ್ನು ನಿರ್ಮಾಣ ಮಾಡಲಾಗಿದೆ. ಇವುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಸಮಾಜದಲ್ಲಿ ಹಿಂದುಳಿದ ಮಕ್ಕಳಿಗೆ ಮನರಂಜನೆ ಹಾಗೂ ಮನೋವಿಕಾಸಕ್ಕೆ ದೊರೆಯುವ ಅವಕಾಶಗಳು ಕಡಿಮೆ.ಇಂತಹ ಮಕ್ಕಳಿಗಾಗಿಯೇ ಬಾಲಭವನಗಳು ರೂಪುಗೊಂಡಿವೆ ಎಂದರಲ್ಲದೆ ಗ್ರಾಮೀಣ ಭಾಗದ ಮಕ್ಕಳಿಗೆ ಬಾಲಭವನಗಳಿಗೆ ಭೇಟಿ ನೀಡಿದಾಗ ಪ್ರವಾಸದ ಅನುಭವವಾಗುವಂತೆ ಜಿಲ್ಲಾ ಬಾಲಭವನಗಳನ್ನು ರೆಸಾರ್ಟ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಯೋಜನೆಗಳನ್ನು ರೂಪಿಸಿ ಸರ್ಕಾರದಿಂದ ಅನುದಾನವನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ಜಿಲ್ಲಾ/ತಾಲ್ಲೊಕುಗಳಲ್ಲಿ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಅನುದಾನವನ್ನು ಸಮರ್ಪಕವಾಗಿ ಬಳಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಬಾಲಭವನ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ವಿದ್ಯಾಕುಮಾರಿ ಮಾತನಾಡಿ ಜಿಲ್ಲಾ ಬಾಲಭವನವು ಜಿಲ್ಲೆ ಹಾಗೂ ತಾಲ್ಲೊಕು ಮಟ್ಟದಲ್ಲಿ ಮಕ್ಕಳ ಮನೋವಿಕಾಸ ಹಾಗೂ ಬೌದ್ಧಿಕ ಚಟುವಟಿಕೆಗಳಿಗೆ ಪೂರಕವಾಗುವಂತೆ ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಬಾಲಭವನ ಸಮಿತಿ ಕಾರ್ಯದರ್ಶಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಎಂ.ಎಸ್ ಶ್ರೀಧರ್ ರವರು ಸಭೆಗೆ ಬಾಲ ಭವನ ಪ್ರಗತಿ ಮಾಹಿತಿ ನೀಡುತ್ತ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿ ಜಿಲ್ಲಾ ಹಾಗೂ ತಾಲ್ಲೊಕುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ ರವರು ಜಿಲ್ಲಾ ಬಾಲಾಭವನ ಸಮಿತಿಯ ಸದಸ್ಯರು, ತಾಲ್ಲೂಕು ಬಾಲಭವನಗಳ ಕಾರ್ಯದರ್ಶಿಗಳು ಎಲ್ಲ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

