ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದವರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ಮತ್ತು ೧೦ ಕೋಟಿ ರೂ. ವರೆಗೂ ವಿಧಿಸಬಹುದಾದ ಸುಗ್ರೀವಾಜ್ಞೆಗೆ ಉತ್ತರಾಖಂಡ ರಾಜ್ಯಪಾಲ ಗುರ್ಮೀತ್ ಸಿಂಗ್ ಶನಿವಾರ ಒಪ್ಪಿಗೆ ನೀಡಿದ್ದಾರೆ.
ರಾಜ್ಯಪಾಲರ ಒಪ್ಪಿಗೆಯೊಂದಿಗೆ ಉತ್ತರಾಖಂಡ ಸ್ಪರ್ಧಾತ್ಮಕ ಪರೀಕ್ಷೆ (ನೇಮಕಾತಿ ಅಕ್ರಮ ತಡೆ) ಸುಗ್ರೀವಾಜ್ಞೆ ಕಾಯ್ದೆಯಾಗಿ ಮಾರ್ಪಟ್ಟಿದೆ. ಈ ಕಾಯ್ದೆಯ ಅನ್ವಯ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವವರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ಮತ್ತು ೧೦ ಕೋಟಿ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಅಲ್ಲದೇ ಈ ಅಕ್ರಮದಿಂದ ಸಂಪಾದನೆ ಮಾಡಿರುವ ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಸುಗ್ರೀವಾಜ್ಞೆ ಒಪ್ಪಿಗೆ ಸೂಚಿಸಿದ್ದಕ್ಕೆ ರಾಜ್ಯಪಾಲರಿಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಧನ್ಯವಾದ ಅರ್ಪಿಸಿದ್ದು, ಈಗ ಕಾಯ್ದೆ ರಾಜ್ಯದಲ್ಲಿ ಇನ್ನ ಮುಂದೆ ನಡೆಯುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನ್ವಯವಾಗಲಿದೆ. ತಪ್ಪಿತಸ್ಥರನ್ನು ಶಿಕ್ಷಿಸಲು ಕಠಿಣ ಪರೀಕ್ಷಾ ಕಾನೂನು ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.