ನಗರದ ಅಂದ ಗೆಡಿಸುವ ಪ್ರಚಾರ ಸಾಮಗ್ರಿಗಳನ್ನು ಬಳಸಿದಲ್ಲಿ ಕಠಿಣ ಕ್ರಮ-ಪಾಲಿಕೆ ಆಯುಕ್ತ

ತುಮಕೂರು ಮಹಾನಗರಪಾಲಿಕೆಯ ಅನುಮತಿ ಪಡೆಯದೆ ನಗರ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್, ಕಟೌಟ್, ಗೋಡೆ ಬರಹ, ನಾಮಫಲಕ, ಜಾಹೀರಾತು ಫಲಕ ಅಳವಡಿಸಿದಲ್ಲಿ ಕರ್ನಾಟಕ ರಾಜ್ಯ ಸಾರ್ವಜನಿಕ ಸ್ಥಳಗಳ ಅಂದ ಗೆಡಿಸುವ ನಿಯಂತ್ರಣ ಕಾಯ್ದೆ ೧೯೮೧ ಹಾಗೂ ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ ೧೯೭೬ರ ಅಧ್ಯಾಯ ೧೪, ಪ್ರಕರಣ ೨೮೮ಎ ಯಿಂದ ಡಿ ಕಾಯ್ದೆಗಳನ್ವಯ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ತುಮಕೂರು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವುದೇ ಸಭೆ ಸಮಾರಂಭ, ಹುಟ್ಟಿದ ಹಬ್ಬ ಹಾಗೂ ಇನ್ನಿತರೆ ಕಾರಣಗಳಿಗೆ ಪ್ರಚಾರ ಸಾಮಗ್ರಿಗಳನ್ನು ಅಳವಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಮುಂದುವರೆದು, ಅನುಮತಿ ಪಡೆಯುವ ಸಂಬAಧ ಬಟ್ಟೆ ಬ್ಯಾನರ್, ಬಟ್ಟೆ ಬಾವುಟ ಹಾಗೂ ಬಟ್ಟೆ ಫ್ಲೆಕ್ಸ್ಗಳಿಗೆ ಮಾತ್ರ ಅನುಮತಿ ನೀಡಲಿದ್ದು, ಅನುಮತಿ ನೀಡಿರುವ ಅಂತಿಮ ದಿನಾಂಕ/ ಸಮಯದ ತರುವಾಯ ಸ್ವತಃ ಹಾಕಿದವರೇ ತೆರವುಗೊಳಿಸತಕ್ಕದ್ದು. ಇಲ್ಲವಾದಲ್ಲಿ ರೂ. ೧೦ಸಾವಿರ ರೂ.ಗಳ ದಂಡ ವಿಧಿಸಿ ಪಾಲಿಕೆ ವತಿಯಿಂದ ತೆರವುಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಂತೆಯೇ ಪ್ಲಾಸ್ಟಿಕ್ ಬಳಸಿ ತಯಾರಿಸುವ ಫ್ಲೆಕ್ಸ್, ಬ್ಯಾನರ್ ಇತರೆ ಪ್ರಚಾರ ಸಾಮಗ್ರಿಗಳನ್ನು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ ೨೦೧೬ರನ್ವಯ ನಿಷೇಧಿಸಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

You May Also Like