ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಶಿರಾ ತಾಲ್ಲೋಕು ಕಸಬಾ ಹೋಬಳಿ ರತ್ನಸಂದ್ರ ಗ್ರಾಮದಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಶಿರಾ ತಾಲ್ಲೋಕು ಕಸಬಾ ಹೋಬಳಿ ರತ್ನಸಂದ್ರ ಗ್ರಾಮದಲ್ಲಿ ೫೬೦ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿದ್ದು, ನ್ಯಾಯಬೆಲೆ ಅಂಗಡಿ ಮಂಜೂರಾತಿ ಪಡೆಯಲು ಇಚ್ಛಿಸುವ ಅರ್ಜಿದಾರರು ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ ೨೦೧೬ ಮತ್ತು ತಿದ್ದುಪಡಿ ಆದೇಶಗಳನ್ವಯ ನಿಗಧಿತ ಆದ್ಯತೆಗಳನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.
ರಾಜ್ಯ ಸರ್ಕಾರಿ ಸ್ವಾಮ್ಯದ ನಿಗಮ/ ಸಂಸ್ಥೆ/ ಗ್ರಾಮ ಪಂಚಾಯತಿ ಮತ್ತು ಸ್ಥಳೀಯ ಸಂಸ್ಥೆ; ಸಹಕಾರ ಸಂಘಗಳಾದ ತಾಲ್ಲೋಕು ವ್ಯವಸಾಯೋತ್ಪನ್ನ ಸಹಕಾರ ಸಂಘ/ವ್ಯವಸಾಯ ಸೇವಾ ಸಹಕಾರ ಸಂಘ(ನಿ), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಥವಾ ವಿ.ಎಸ್.ಎಸ್.ಎಂ.ಎಸ್ (PACS), ತೋಟಗಾರಿಕೆ ಉತ್ಪನ್ನಗಳ (HOPCOMS) ಸಹಕಾರ ಸಂಘದ ಮಾರಾಟ ಮಂಡಳಿ ನಿಯಮಿತ, ನೋಂದಾಯಿತ ಸಹಕಾರ ಸಂಘ, ನೋಂದಾಯಿತ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘ, ದೊಡ್ಡ ಪ್ರಮಾಣದ ಆದಿವಾಸಿಗಳ ವಿವಿಧೋದ್ದೇಶ ಸಹಕಾರ ಸಂಘ, ನೋಂದಾಯಿತ ನೇಕಾರರ ಸಹಕಾರ ಸಂಘ, ನೋಂದಾಯಿತ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ, ನೋಂದಾಯಿತ ವಿವಿಧೋದ್ದೇಶ ಸಹಕಾರ ಸಂಘ, ಅಂಗವಿಕಲರ ಕಲ್ಯಾಣ ಸಹಕಾರ ಸಂಘ ಹಾಗೂ ಬ್ಯಾಂಕಿನಿ0ದ ನಡೆಸಲ್ಪಡುವ ಸಹಕಾರ ಸಂಘ ಅಥವಾ ಸಹಕಾರ ಬ್ಯಾಂಕ್; ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಭರ್ತಿ ಮಾಡಿದ ನಿಗಧಿತ ಅರ್ಜಿ ನಮೂನೆ ‘ಎ’ಯೊಂದಿಗೆ ಸಹಕಾರ ಸಂಘ/ಸಂಸ್ಥೆ ಅಥವಾ ಸ್ವ-ಸಹಾಯ ಸಂಘಗಳಾದಲ್ಲಿ ನೋಂದಾವಣಿ ಪತ್ರ, ಸಹಕಾರ ಸಂಘ/ಸಂಸ್ಥೆಗಳಾದಲ್ಲಿ ಕಳೆದ ೩ ವರ್ಷಗಳ ದೃಢೀಕೃತ ಲೆಕ್ಕ ಪರಿಶೋಧನಾ ವರದಿ, ಸಹಕಾರ ಸಂಘ/ಸಂಸ್ಥೆಗಳ ಉಪ ನಿಯಮಗಳು(ಬೈಲಾ), ಸಹಕಾರ ಸಂಘ/ಸಂಸ್ಥೆಗಳ ಪರವಾಗಿ ನ್ಯಾಯಬೆಲೆ ಅಂಗಡಿ ನಡೆಸಲು ಮತ್ತು ಪ್ರಮಾಣ ಪತ್ರ ಸಲ್ಲಿಸಲು ಅಧಿಕಾರ ಪಡೆದಿರುವ ಪ್ರತಿನಿಧಿಯನ್ನು ನೇಮಿಸಿರುವ ಬಗ್ಗೆ ನಿರ್ಣಯ/ನೇಮಕಾತಿ ಪತ್ರ, ಸಹಕಾರ ಸಂಘದ ವಿರುದ್ಧ ಕರ್ನಾಟಕ ಸೊಸೈಟೀಸ್ ನೊಂದಣಿ ಆಕ್ಟ್ ಅಡಿ ವಿಚಾರಣೆ ಹಾಗೂ ಟ್ರಯಲ್ ಮತ್ತು ಲಿಕ್ವಿಡೇಷನ್ ನಡವಳಿ ನಡೆದಿರುವುದಿಲ್ಲ ಎಂಬ ಬಗ್ಗೆ ಸಕ್ಷಮ ಪ್ರಾಧಿಕಾರಿಯು ನೀಡಿರುವ ದೃಢೀಕರಣ ಪತ್ರ, ವ್ಯಾಪಾರ ಮಳಿಗೆಯ ಖಾತೆ ಅಥವಾ ಬಾಡಿಗೆ/ಕರಾರು ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಸಹಕಾರ ಸಂಘದವರು ಅಧಿಕೃತವಾಗಿ ನೇಮಿಸಿರುವ ಪ್ರತಿನಿಧಿಯ ಇತ್ತೀಚಿನ ೩ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಸಲ್ಲಿಸಬೇಕು. ಕನಿಷ್ಟ ೩ ವರ್ಷದ ಹಿಂದೆ ನೋಂದಾವಣಿಯಾಗಿರುವ, ೩ ವರ್ಷಗಳ ನಿರಂತರ ಚಟುವಟಿಕೆಯಲ್ಲಿರುವ ಸಹಕಾರ ಸಂಘಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳು ೧ ವರ್ಷಗಳಿಂದ ಕನಿಷ್ಟ ೧ ಲಕ್ಷ ರೂ. ಮೊತ್ತದ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಬಗ್ಗೆ ಮಾಹಿತಿ ಸಲ್ಲಿಸಬೇಕು. ಸಹಕಾರ ಸಂಘ/ ಮಹಿಳಾ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ/ಕಾರ್ಯದರ್ಶಿ ಹಾಗೂ ವಿಕಲಚೇತನರು/ತೃತೀಯ ಲಿಂಗಿಗಳು ತಮ್ಮ ವಿದ್ಯಾರ್ಹತೆ(ಕನಿಷ್ಟ ಎಸ್.ಎಸ್.ಎಲ್.ಸಿ. ಉತ್ತೀರ್ಣ) ಬಗ್ಗೆ ಅಂಕಪಟ್ಟಿ ಮತ್ತು ಆಧಾರ್ ಕಾರ್ಡ್ ಪತ್ರಿಯನ್ನು ಲಗತ್ತಿಸಬೇಕು.
ಮೇಲ್ಕಾಣಿಸಿದ ಅಂಶಗಳ ಷರತ್ತಿಗೆ ಒಳಪಟ್ಟು ಆಯಾ ಪ್ರದೇಶ ವ್ಯಾಪ್ತಿಯ ಸಂಘ ಸಂಸ್ಥೆಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿದ್ದು, ಖಾಸಗಿ ವ್ಯಕ್ತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ನಿಗಧಿತ ಅರ್ಜಿ ನಮೂನೆ-‘ಎ’ಯನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ಆಹಾರ ಶಾಖೆಯಲ್ಲಿ ಅಥವಾ ಶಿರಾ ತಾಲ್ಲೋಕು ಕಚೇರಿಯ ಆಹಾರ ಶಾಖೆಯಲ್ಲಿ ಪಡೆಯಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಯನ್ನು ೨೦೨೩ರ ಮಾರ್ಚ್ ೨೩ರೊಳಗೆ ಜಂಟಿ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ನಂ-೨೦೫, ಮಿನಿ ವಿಧಾನಸೌಧ ಇವರ ಕಚೇರಿಗೆ ಸಲ್ಲಿಸಬೇಕು. ನಿಗಧಿತ ಅವಧಿಯ ನಂತರ ಸಲ್ಲಿಕೆಯಾಗುವ ಅಥವಾ ಬೇರೆ ಕಚೇರಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಪೂರ್ವ ಸೂಚನೆ/ಮಾಹಿತಿ ನೀಡದೇ ನ್ಯಾಯಬೆಲೆ ಅಂಗಡಿ ಪ್ರಕಟಣೆ ರದ್ದುಪಡಿಸುವ ಹಕ್ಕು ಮತ್ತು ಅರ್ಜಿಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಹಕ್ಕು ಜಂಟಿ ನಿರ್ದೇಶಕರ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.