ನಿನ್ನೆ ( ಮಾರ್ಚ್ 3 ) ರಾಜ್‌ವಂಶದ ಮತ್ತೊಂದು ಕುಡಿ ಯುವ ರಾಜ್‌ಕುಮಾರ್ ನಟನೆಯ ಮೊದಲ ಚಿತ್ರದ ಟೈಟಲ್ ರಿವೀಲ್ ಆಗಿದೆ. ಈ ಹಿಂದೆ ಯುವ ರಣಧೀರ ಕಂಠೀರವ ಚಿತ್ರದ ಮೂಲಕ ಯುವ ರಾಜ್‌ಕುಮಾರ್ ಇಂಡಸ್ಟ್ರಿ ಪ್ರವೇಶಿಸಲು ಯೋಜನೆ ಹಾಕಲಾಗಿತ್ತು. ಆದರೆ ಅಪ್ಪು ಅಕಾಲಿಕ ಮರಣದಿಂದಾಗಿ ಯೋಜನೆಯಲ್ಲಿ ದೊಡ್ಡ ಬದಲಾವಣೆಯಾಗಿದ್ದು, ಸಂತೋಷ್ ಆನಂದ್‌ರಾಮ್ ನಿರ್ದೇಶನದ ಚಿತ್ರದ ಮೂಲಕ ಯುವ ರಾಜ್‌ಕುಮಾರ್ ಸಿನಿಮಾ ಕ್ಷೇತ್ರ ಪ್ರವೇಶಿಸಲು ಸಜ್ಜಾಗಿದ್ದಾರೆ.
ಇನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಮೂರು ಚಿತ್ರಗಳನ್ನು ನಿರ್ಮಿಸಿದ್ದ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಕಳೆದ ವರ್ಷವೇ ಯುವ ರಾಜ್‌ಕುಮಾರ್ ಅವರ ಸ್ಟೈಲಿಶ್ ಫೋಟೊಶೂಟ್ ಮಾಡಿಸಿ ಬಿಡುಗಡೆಗೊಳಿಸಿ, ಚಿತ್ರ ಮಾಡುವುದಾಗಿ ಘೋಷಣೆ ಮಾಡಿ ದೊಡ್ಮನೆ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು. ಹೀಗೆ ಕಳೆದ ವರ್ಷ ಅನೌನ್ಸ್ ಆದ ಈ ಚಿತ್ರದ ಕುರಿತು ನಂತರ ಹೆಚ್ಚೇನೂ ಅಪ್‌ಡೇಟ್ ಬರಲಿಲ್ಲ.
ಇದರಿಂದ ಬೇಸರಕ್ಕೊಳಗಾದ ದೊಡ್ಮನೆ ಅಭಿಮಾನಿಗಳು ಚಿತ್ರದ ಅಪ್‌ಡೇಟ್ ನೀಡುವಂತೆ ಪದೇ ಪದೇ ಸಂತೋಷ್ ಆನಂದ್‌ರಾಮ್ ಹಾಗೂ ಹೊಂಬಾಳೆ ಫಿಲ್ಮ್ಸ್ ಬಳಿ ಬೇಡಿಕೆ ಇಟ್ಟಿದ್ದರು. ಹೀಗೆ ಅಭಿಮಾನಿಗಳ ಸಾಲು ಸಾಲು ಬೇಡಿಕೆಯ ಬಳಿಕ ನಿನ್ನೆಯಷ್ಟೇ ( ಮಾರ್ಚ್ 3 ) ಚಿತ್ರತಂಡ ಟೀಸರ್ ಬಿಡುಗಡೆ ಮಾಡುವುದರ ಮೂಲಕ ತಮ್ಮ ಚಿತ್ರದ ಟೈಟಲ್ ಅನ್ನು ಅನಾವರಣ ಮಾಡಿದೆ.
ಯುವ ಎಂಬ ಶೀರ್ಷಿಕೆಯನ್ನು ಚಿತ್ರತಂಡ ಚಿತ್ರಕ್ಕೆ ಇಟ್ಟಿದ್ದು, ದೊಡ್ಮನೆ ಅಭಿಮಾನಿಗಳು ಟೈಟಲ್ ಕಂಡು ಮೆಚ್ಚಿಕೊಂಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಬಿಡುಗಡೆ ಮಾಡಿರುವ ಟೀಸರ್‌ಗೆ ಫಿದಾ ಆಗಿದ್ದಾರೆ. ಪೋಸ್ಟರ್ ಹಾಗೂ ಟೀಸರ್‌ನಲ್ಲಿ ಯುವ ರಾಜ್‌ಕುಮಾರ್ ಲುಕ್ ಕಂಡು ಈತ ಪಕ್ಕಾ ಸ್ಯಾಂಡಲ್‌ವುಡ್ ರೂಲ್ ಮಾಡ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ಟೀಸರ್‌ನಲ್ಲಿನ ಕೌಂಟರ್ ಡೈಲಾಗ್‌ಗಳಂತೂ ರಾಜ್ ಫ್ಯಾಮಿಲಿ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ.
ತಾವು ಇಷ್ಟಪಡುವ ಕುಟುಂಬದಿಂದ ಬರುತ್ತಿರುವ ನಟ ಎಂಬ ಕಾರಣಕ್ಕೆ ಮಾತ್ರವಲ್ಲದೇ ತನ್ನಲ್ಲಿರುವ ಟ್ಯಾಲೆಂಟ್‌ನಿಂದ ಅಭಿಮಾನಿಗಳಲ್ಲಿ ವಿಶ್ವಾಸ ಮೂಡಿಸಿರುವ ಯುವ ರಾಜ್‌ಕುಮಾರ್ ಕೇವಲ ದೊಡ್ಮನೆ ಅಭಿಮಾನಿಗಳು ಅಲ್ಲದೇ ಸುದೀಪ್ ಹಾಗೂ ಯಶ್ ಅಭಿಮಾನಿಗಳ ಮನಸ್ಸನ್ನೂ ಸಹ ಗೆದ್ದಿದ್ದಾರೆ.
ಯುವ ಚಿತ್ರದ ಟೀಸರ್ ನೋಡಿದ ಯಶ್ ಹಾಗೂ ಸುದೀಪ್ ಅಭಿಮಾನಿಗಳು ಹೊಸದಾಗಿ ಕಾಲಿಟ್ಟಿರುವ ಯುವ ರಾಜ್‌ಕುಮಾರ್‌ಗೆ ಸ್ವಾಗತ ಕೋರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಯಶ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೋಸ್ಟ್ ಹಾಕಿ ಯುವ ರಾಜ್‌ಕುಮಾರ್‌ಗೆ ಸ್ವಾಗತ ಕೋರಿದ್ದಾರೆ. ಪೈಪೋಟಿ ಯುಗದಲ್ಲಿ ಫ್ಯಾನ್ ವಾರ್ ಬಿಟ್ಟು ಸ್ವಾಗತ ಕೋರಿದ ಯಶ್ ಹಾಗೂ ಸುದೀಪ್ ಅಭಿಮಾನಿಗಳಿಗೆ ರಾಜ್‌ವಂಶದ ಅಭಿಮಾನಿಗಳು ಧನ್ಯವಾದ ತಿಳಿಸಿದ್ದಾರೆ.