ನಮ್ಮ ಮೇಲೆ ಆರೋಪ ಮಾಡಿ ಕಾಂಗ್ರೆಸ್ನ ಪಾಪ ಕಳೆದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ನವರ ಪ್ರಕರಣಗಳು ಮುಂದೆ ಬಯಲಾಗಲಿವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಚಿತ್ರದುರ್ಗ: ಹಗರಣ ಮುಚ್ಚಿ ಹಾಕಲೆಂದೇ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿಹಾಕಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಪುತ್ರ ಪ್ರಶಾಂತ್ ಲಂಚ ಪ್ರಕರಣದಲ್ಲಿ ಲೋಕಾಯುಕ್ತದ ಬಲೆಗೆ ಬಿದ್ದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಕೂಡ ಒತ್ತಾಯಿಸಿದ್ದರು. ಇದಕ್ಕೆ ಸಿಎಂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಆಡಳಿತ ಕಾಲದಲ್ಲಿ ಸಚಿವರೊಬ್ಬರ ಕಚೇರಿಯಲ್ಲಿ 2 ಲಕ್ಷ ರೂ. ನಗದು ಸಿಕ್ಕಿತ್ತು. ಆಗ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಾ? ಅಂದು ಲೋಕಾಯುಕ್ತ ಸಂಸ್ಥೆ ಇದ್ದಿದ್ದರೆ ಇವರೆಲ್ಲ ಬಂಧನ ಕೊಳಗಾಗುತ್ತಿದ್ದರು ಎಂದು ಬೊಮ್ಮಾಯಿ ಹೇಳಿದ್ದಾರೆ. ಹಗರಣ ಮುಚ್ಚಿ ಹಾಕಲೆಂದೆ ಲೋಕಾಯುಕ್ತ ಸಂಸ್ಥೆ ಮುಚ್ಚಿದ್ದರು.
ವಿರೂಪಾಕ್ಷಪ್ಪ ಮಾಡಲ್ ಹಾಗೂ ಅವರ ಪುತ್ರನ ನಿವಾಸದಲ್ಲಿ ಕೋಟ್ಯಂತರ ರೂ. ನಗದು, ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾದ ಬಳಿಕ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ತೀವ್ರಗೊಂಡಿದೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ.