ಅರಣ್ಯ ದಹನ ರೋದನ: ಕರುನಾಡಿಗೆ ಕಾಡ್ಗಿಚ್ಚು ಆತಂಕ; ಅಪಾರ ಸಸ್ಯ, ಜೀವಸಂಕುಲ ನಾಶ

ಅರಣ್ಯ ದಹನ ರೋದನ: ಕರುನಾಡಿಗೆ ಕಾಡ್ಗಿಚ್ಚು ಆತಂಕ; ಅಪಾರ ಸಸ್ಯ, ಜೀವಸಂಕುಲ ನಾಶ

ಬೇಸಿಗೆ ಬಿರುಸುಗೊಳ್ಳುತ್ತಿದ್ದು ಬಿಸಿಲಿನ ತಾಪಕ್ಕೆ ಕಾಡ್ಗಿಚ್ಚಿನ ಆತಂಕ ಶುರುವಾಗಿದೆ. ಕಳೆದ 15 ದಿನಗಳಿಂದೀಚೆಗೆ ಮೈಸೂರು, ದಕ್ಷಿಣ ಕನ್ನಡ, ಕೊಡಗು, ಗದಗ, ಶಿವಮೊಗ್ಗ, ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಕಾಡ್ಗಿಚ್ಚು ಕಾಣಿಸಿ ಕೊಂಡಿದೆ.

ಅರಣ್ಯ ಇಲಾಖೆಯ ಕಟ್ಟೆಚ್ಚರದ ನಡುವೆಯೂ ಅರಣ್ಯಕ್ಕೆ ಸಂಕಷ್ಟ ಎದುರಾಗಿದ್ದು, ಬೆಂಕಿ ನಂದಿಸಲು ಅತ್ಯಾಧುನಿಕ ಸಾಮಗ್ರಿಗಳ ಕೊರತೆ ಜತೆಗೆ, ಇಲಾಖೆ ಸಿಬ್ಬಂದಿ ಜೀವ ಕಳೆದುಕೊಳ್ಳುವಂತಾಗಿದೆ.

ದಿನೇದಿನೆ ತಾಪಮಾನದಲ್ಲಿ ಏರಿಕೆ ಕಂಡುಬರುತ್ತಿದ್ದು ಮಾರ್ಚ್ ಮೊದಲ ವಾರದಲ್ಲೇ ಉಷ್ಣಾಂಶವು ಗರಿಷ್ಠ 36-38 ಡಿಗ್ರಿವರೆಗೆ ತಲುಪಿದೆ. ಬಿಸಿ ಗಾಳಿ, ಬಿಸಿಲಿನ ಹೊಡೆತಕ್ಕೆ ಹಚ್ಚ ಹಸಿರಿನ ಕಾಡುಗಳಲ್ಲೂ ಎಲೆಗಳು ಉದುರುತ್ತಿವೆ. ಆಕಸ್ಮಿಕ ಅಥವಾ ಕಿಡಿಗೇಡಿಗಳ ಕೃತ್ಯದಿಂದಲೋ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಆದರೆ, ಕಾಡ್ಗಿಚ್ಚು ನಂದಿಸಲು ಅರಣ್ಯ ಇಲಾಖೆ ಸರ್ವಸನ್ನದ್ಧವಾಗದೆ ಜೀವ ಸಂಕುಲ ಮತ್ತು ಅಪಾರ ಪ್ರಮಾಣದ ಸಸ್ಯಸಂಪತ್ತು ನಾಶವಾಗುತ್ತಿದೆ.

ರಾಜ್ಯವು ಪ್ರಸ್ತುತ 30 ಲಕ್ಷಕ್ಕೂ ಅಧಿಕ ಹೆಕ್ಟೇರ್ ಅರಣ್ಯ ಹೊಂದಿದೆ. ಪ್ರತಿವರ್ಷವೂ ನಾನಾ ಕಾರಣಗಳಿಂದ ಅರಣ್ಯ ಪ್ರದೇಶದ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಅಕ್ರಮವಾಗಿ ಮರಗಳ ಕಡಿತಲೆ ಒಂದೆಡೆಯಾದರೆ, ಬೆಂಕಿ ಬಿದ್ದು ನೂರಾರು ಹೆಕ್ಟೇರ್ ಅರಣ್ಯದಲ್ಲಿನ ಗಿಡಮರಗಳು ಸುಟ್ಟು ಕರಕಲಾಗುತ್ತಿರುವುದು ಮತ್ತೊಂದೆಡೆ. ಬೆಂಕಿಯ ರುದ್ರ ನರ್ತನದಿಂದ ಪರಿಸರ ಅಸಮತೋಲನ ಉಂಟಾಗುತ್ತಿದೆ.

You May Also Like