ತರುಣ್ ಸುಧೀರ್- ದರ್ಶನ್ ಕ್ರೇಜಿ ಕಾಂಬಿನೇಷನ್ ‘ಕಾಟೇರ’ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡ್ತಿದ್ದು ರಾಧನಾ ರಾಮ್ ನಾಯಕಿಯಾಗಿ ನಟಿಸ್ತಿದ್ದಾರೆ. ಈಗಾಗಲೇ 3 ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಆಗಿದೆ.
ಇತ್ತೀಚೆಗೆ ಕನಕಪುರ ಬಳಿ ಚಿತ್ರದ ಒಂದಷ್ಟು ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿದೆ. ಇದೀಗ ಸಿನಿಮಾ ಕ್ರೇಜಿ ನ್ಯೂಸ್‌ವೊಂದು ಹರಿದಾಡ್ತಿದೆ.
‘ಕಾಟೇರ’ ಚಿತ್ರದಲ್ಲಿ 70 ದಶಕದ ಕಥೆಯನ್ನು ಹೇಳಲಾಗುತ್ತಿದೆ. ಚಿತ್ರದಲ್ಲಿ ದರ್ಶನ್, ರಾಧನಾ ಬಿಟ್ಟರೆ ತೆಲುಗು ನಟ ಜಗಪತಿ ಬಾಬು ನಟಿಸೋ ಪಕ್ಕಾ ಆಗಿದೆ. ಇತ್ತೀಚೆಗೆ ದರ್ಶನ್ ಹುಟ್ಟುಹಬ್ಬದ ವಿಶೇಷವಾಗಿ ಸಿನಿಮಾ ಟೈಟಲ್ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. D56 ಟೈಟಲ್‌ನಲ್ಲಿ ಶುರುವಾದ ಸಿನಿಮಾ ಈಗ ‘ಕಾಟೇರ’ ಹೆಸರಿನಲ್ಲಿ ಮುಂದುವರೆದಿದೆ. ವಿ. ಹರಿಕೃಷ್ಣ ಮ್ಯೂಸಿಕ್ ಸುಧಾಕರ್ ರಾಜ್ ಸಿನಿಮಾಟೋಗ್ರಫಿ, ಕೆ. ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ.
ಆಕ್ಷನ್ ಎಂಟರ್‌ಟೈನರ್ ‘ಕಾಟೇರ’ ಚಿತ್ರದಲ್ಲಿ ದರ್ಶನ್‌ನ ಬಹಳ ವಿಭಿನ್ನವಾಗಿ ತೋರಿಸುವ ಪ್ರಯತ್ನ ನಡೀತಿದೆ. ಇನ್ನು ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕಟ್ಟಿಕೊಡುವ ಸಾಧ್ಯತೆಯಿದೆ. ಅದಕ್ಕೆ ತಕ್ಕಂತೆ ಚಿತ್ರದ ಸ್ಟಾರ್‌ಕಾಸ್ಟ್ ಪ್ಲ್ಯಾನ್ ಮಾಡ್ತಿದೆ ಚಿತ್ರತಂಡ. ಸದ್ಯ ಚಿತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸ್ತಾರೆ ಎನ್ನುವ ಗುಸು ಗುಸು ಶುರುವಾಗಿದೆ. ಅದೇ ನಿಜವಾದರೆ ದರ್ಶನ್ ಅಭಿಮಾನಿಗಳಿಗೆ ಹಬ್ಬವೇ ಸರಿ. ಯುಗಾದಿ ಸಂಭ್ರಮದಲ್ಲಿ ಈ ವಿಚಾರವನ್ನು ಬಹಿರಂಗಪಡಿಸುವ ಸಾಧ್ಯತೆಯಿದೆಯಂತೆ.
ತಮಿಳಿನ ಅದ್ಭುತ ಕಲಾವಿದ ವಿಜಯ್ ಸೇತುಪತಿ. ತಮ್ಮ ಅದ್ಭುತ ನಟನೆಗೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿದೆ. ಹೀರೊ ಆಗಿ ಮಾತ್ರವಲ್ಲದೇ ಮಲ್ಟಿಸ್ಟಾರರ್ ಸಿನಿಮಾಗಳಲ್ಲೂ ವಿಜಯ್ ನಟಿಸ್ತಿದ್ದಾರೆ. ನೆಗೆಟಿವ್ ರೋಲ್‌ನಲ್ಲೂ ಅಬ್ಬರಿಸುತ್ತಿದ್ದಾರೆ. ಈಗ ಬಾಲಿವುಡ್ ಅಂಗಳಕ್ಕೂ ಅಡಿ ಇಟ್ಟಿದ್ದಾರೆ. ಅಂದಹಾಗೆ ಇತ್ತೀಚೆಗೆ ಶಿವಣ್ಣ ‘ಘೋಸ್ಟ್’ ಚಿತ್ರದಲ್ಲಿ ವಿಜಯ್ ಸೇತುಪತಿ ನಟಿಸ್ತಾರೆ ಎನ್ನಲಾಗಿದೆ. ಶೀಘ್ರದಲ್ಲೇ ಶೂಟಿಂಗ್‌ನಲ್ಲಿ ಭಾಗಿ ಆಗುವ ಸಾಧ್ಯತೆಯಿದೆ.
ಚಿತ್ರರಂಗಕ್ಕೆ ಬಂದ ಆರಂಭದಲ್ಲೇ ವಿಜಯ್ ಸೇತುಪತಿ ಕನ್ನಡ ಚಿತ್ರದಲ್ಲಿ ನಟಿಸಿದ್ದರು. ಇನ್ನು ಸೇತುಪತಿ ಸಾಲು ಸಾಲು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ‘ಕಾಟೇರ’ ತಂಡ ಅವರನ್ನು ಅಪ್ರೋಚ್ ಮಾಡಿರೋದು ನಿಜಾನಾ? ಅವರು ದರ್ಶನ್ ಜೊತೆ ಸ್ಕ್ರೀನ್‌ಶೇರ್ ಮಾಡಿಕೊಳ್ಳಲು ಒಪ್ಪಿಕೊಂಡ್ರಾ? ಯುಗಾದಿ ಹಬ್ಬಕ್ಕೆ ನಿಜಕ್ಕೂ ಈ ಬಗ್ಗೆ ಮಾಹಿತಿ ಸಿಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.