ಬೆಂಗಳೂರು, ಮಾರ್ಚ್ 17; ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ವಿಫಲವಾಗಿರುವ ಸಂಬಂಧಕರ್ನಾಟಕಹೈಕೋರ್ಟ್ ಮತ್ತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ಹಿಗ್ಗಾಮುಗ್ಗಾ ಜಾಡಿಸಿದೆ.
ರಾಜ್ಯದ ಗ್ರಾಮಗಳಿಗೆ ಸ್ಮಶಾನಕ್ಕೆ ಜಮೀನು ಕಲ್ಪಿಸಿರುವ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿದ ಸಂಬಂಧ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ಜಯರಾಂ ವಿಚಾರಣೆಗೆ ಖುದ್ದು ಹಾಜರಾಗಿದ್ದರು. ದಕ್ಷಿಣ ಕನ್ನಡ, ಗದಗ, ವಿಜಯನಗರ, ಧಾರವಾಡ, ವಿಜಯಪುರ ಸೇರಿಂತೆ ಹಲವಾರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆನ್‌ಲೈನ್ ಮೂಲಕ ಹಾಜರಾಗಿದ್ದರು.
ಸ್ಮಶಾನ ಭೂಮಿ; ನಾಲ್ವರು ಡಿಸಿಗಳ ಖುದ್ದು ಹಾಜರಿಗೆ ಹೈಕೋರ್ಟ್ ಆದೇಶ
75 ವರ್ಷಗಳಿಂದಲೂ ನಾಟಕ: ಸರ್ಕಾರದ ವಾದ ಆಲಿಸಿದ ಬಳಿಕ ನ್ಯಾಯಪೀಠ, ಕಳೆದ 75 ವರ್ಷಗಳಿಂದ ನಾಟಕ ನಡೆಯುತ್ತಿದೆ ಹೊರತು ಜನಸಾಮಾನ್ಯರು ಕೇಳುವ ಅಗತ್ಯ ಸೌಲಭ್ಯಗಳಾದ ನೀರು, ರಸ್ತೆ ಮತ್ತು ಸ್ಮಶಾನ ಕಲ್ಪಿಸುತ್ತಿಲ್ಲ. ಸರ್ಕಾರಕ್ಕೆ ಅಭಿವೃದ್ಧಿ ಎಲ್ಲ ಬೇಕಿಲ್ಲ. ಆದರೆ, ಮೃತಪಟ್ಟ ಕೆಲವರಿಗೆ ಮಾತ್ರ ದೊಡ್ಡ ದೊಡ್ಡ ಪುತ್ಥಳಿ ಬೇಕಾಗಿದೆ ಎಂದು ಖಾರವಾಗಿ ಹೇಳಿದೆ. ಅಲ್ಲದೇ, ರಾಜ್ಯದಲ್ಲಿ ಯಾವ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿದೆ?. ಯಾವ ಗ್ರಾಮದಲ್ಲಿ ಇಲ್ಲ?, ಸ್ಮಶಾನಕ್ಕೆ ಜಾಗವಿಲ್ಲದ ಗ್ರಾಮಗಳ ಗ್ರಾಮಸ್ಥರು ಭೂಮಿ ಮಂಜೂರಾತಿಗಾಗಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಬಹುದು ಎಂಬುದಾಗಿ ತಿಳಿಸಿ ಪತ್ರಿಕಾ ಪ್ರಕಟಣೆ ಹೊರಡಿಸಬೇಕು ಎಂದು ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿ ಮೂರು ವಾರ ವಿಚಾರಣೆ ಮುಂದೂಡಿತು.
ಹಿರೇಹರಕುಣಿ: ಸ್ಮಶಾನ ಭೂಮಿ ಒತ್ತುವರಿ ಆರೋಪ: ರೊಚ್ಚಿಗೆದ್ದ ಎಸ್ಸಿ ಸಮುದಾಯ
ಪ್ರಮಾಣಪತ್ರದಲ್ಲೇನಿದೆ? ಜಯರಾಂ ಅವರು ಸಲ್ಲಿಸಿದ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಒದಗಿಸಿದ ಸರ್ಕಾರದ ವಕೀಲರು, ರಾಜ್ಯದಲ್ಲಿ ಒಟ್ಟು 30762 ಗ್ರಾಮಗಳಿವೆ. ಅದರಲ್ಲಿ 2491 ಬೇಚರಕ್ (ಜನವಸತಿಯಿಲ್ಲದ) ಗ್ರಾಮಗಳಿವೆ. ಬೇಚರಕ್ ಗ್ರಾಮಗಳನ್ನು ಹೊರತುಪಡಿಸಿದ ಒಟ್ಟು 28,271 ಗ್ರಾಮಗಳ ಪೈಕಿ 28,260 ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ. ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಮತ್ತು ಸರ್ಕಾರ ಜಂಟಿ ಸಮೀಕ್ಷೆ ನಡೆಸಿದರೆ, ಈ ವ್ಯಾಜ್ಯವನ್ನು ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಸ್ಮಶಾನ ಲಭ್ಯವಿಲ್ಲದ ಗ್ರಾಮಗಳ ಕುರಿತು ಕೆಎಸ್‌ಎಲ್‌ಎಸ್‌ಎ ಪತ್ರಿಕಾ ಪ್ರಕಟಣೆ ಹೊರಡಿಸಿ, ಯಾವ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲ ಎಂಬುದರ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು.
ಸ್ಮಶಾನ ಕಾರ್ಮಿಕರ ಸೇವೆ ಖಾಯಂ ಗೆ ಕ್ರಮ: ಬಸವರಾಜ ಬೊಮ್ಮಾಯಿ
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ವೀರಪ್ಪ ಅವರು, ಪ್ರಕರಣದಲ್ಲಿ ಕೆಲವು ಜಿಲ್ಲಾಧಿಕಾರಿಗಳು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಜಿಲ್ಲೆಯ ಕಸ್ಟೋಡಿಯನ್ ಆಗಿರುತ್ತಾರೆ. ಅವರು ಜನರು ಮತ್ತು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಬಾರದು. ಇಡೀ ರಾಜ್ಯದಲ್ಲಿ ಮೂರು ಸಾವಿರ ಮಾತ್ರ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಇವೆಯೇ? ಯಾವೆಲ್ಲಾ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಇಲ್ಲ ಎಂಬುದರ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಸಂಗ್ರಹ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.
ಕಾಗದದಲ್ಲಿ ಅನುಷ್ಠಾನ ಬೇಡ: ಅಲ್ಲದೆ, ಮಾಹಿತಿ ಸಂಗ್ರಹಿಸಲು ಸಾಧ್ಯವಾಗದಿದ್ದರೆ ನಮಗೆ ಹೇಳಿಬಿಡಿ. ಎಲ್ಲೆಲ್ಲಿ ಸ್ಮಶಾನಕ್ಕೆ ಜಾಗವಿಲ್ಲ ಎಂಬ ಮಾಹಿತಿಯನ್ನು ಪಡೆಯಲು ಜಾಹೀರಾತು ನೀಡಲು ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿಗೆ ಸೂಚಿಸುತ್ತೇವೆ. ಕಾಗದದ ಮೇಲೆ ನ್ಯಾಯಾಲಯದ ಆದೇಶ ಅನುಪಾಲನೆ ಬೇಡ. ಪ್ರಾಯೋಗಿಕವಾಗಿ ಪಾಲನೆಯಾಗಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಆದೇಶ, ಸರ್ಕಾರ, ನಾವು ಮತ್ತು ನೀವೆಲ್ಲರೂ ನಿಷ್ಟ್ರಯೋಜಕವಾಗುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಒದಗಿಸದಿರುವುದು ದುರದೃಷ್ಟಕರ. ಯಾವ ಗ್ರಾಮದಲ್ಲೂ ಒಂದು ಮತ ಬಿಡುವುದಿಲ್ಲ. ಎಲ್ಲರೂ ಮತ ಹಾಕಲೇ ಬೇಕು ನೀವು (ಸರ್ಕಾರ) ಹೇಳುತ್ತೀರಿ. ಆದರೆ, ಈ ಊರಿನಲ್ಲಿ ಸ್ಮಶಾನಕ್ಕೆ ಜಾಗ ಇದೆಯಾ ಎಂದು ಯಾರೂ ಕೇಳೋದಿಲ್ಲ. ಚುನಾವಣೆಯಲ್ಲಿ ಗೆಲ್ಲೋದು-ಸೋಲುವುದು ಬೇರೆ ವಿಚಾರ. ಆದರೆ, ಮೂಲ ಅಗತ್ಯಗಳಾದ ನೀರು, ರಸ್ತೆ ಮತ್ತು ಸ್ಮಶಾನವನ್ನು ಜನ ಕೇಳುತ್ತಾರೆ. ಅದನ್ನು ಕಲ್ಪಿಸುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯ. ಆದರೂ ಏಕೆ ಕಲ್ಪಿಸುತ್ತಿಲ್ಲ. ಅವರ ಮೇಲೆ ಇವರು ಹಾಕೋದು, ಇವರ ಮೇಲೆ ಅವರು ಹಾಕುತ್ತಾ ಕಳೆದ 75 ವರ್ಷಗಳಿಂದ ಡ್ರಾಮಾ ಮಾಡಲಾಗುತ್ತಿದೆ. ಅಭಿವೃದ್ಧಿ ಎಲ್ಲಾ ಯಾರಿಗೂ ಬೇಕಿಲ್ಲ ಎಂದು ಕಟುವಾಗಿ ನುಡಿದ ನ್ಯಾಯಪೀಠ, ಸರ್ಕಾರ ಮೊದಲು ಜನರಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ತಾಕೀತು ಮಾಡಿತು.