ಮನೆಲೆ ಮ್ಯಾಚ್ ನೋಡ್ತಿವಿ ಬಿಡಿ: ಟಿಕೆಟ್ ಬೆಲೆ ನೋಡಿ ಆರ್‌ಸಿಬಿ ಅಭಿಮಾನಿಗಳ ಪ್ರತಿಕ್ರಿಯೆ

IPL 2023 Tickets : ಮನೆಲೆ ಮ್ಯಾಚ್ ನೋಡ್ತಿವಿ ಬಿಡಿ: ಟಿಕೆಟ್ ಬೆಲೆ ನೋಡಿ ಆರ್‌ಸಿಬಿ ಅಭಿಮಾನಿಗಳ ಪ್ರತಿಕ್ರಿಯೆ

ಹು ನಿರೀಕ್ಷಿತ ಐಪಿಎಲ್ 2023 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. 10 ತಂಡಗಳು ಈ ಬಾರಿ ಪ್ರತಿಷ್ಟಿತ ಟ್ರೋಫಿಗಾಗಿ ಕದನ ನಡೆಸಲಿವೆ. ದೇಶಾದ್ಯಂತ 12 ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಕೊರೊನಾ ಸಾಂಕ್ರಾಮಿಕದ ನಂತರ ಇದೇ ಮೊದಲ ಬಾರಿಗೆ ತವರು ಮತ್ತು ಹೊರಗಿನ ಅಂಗಳದಲ್ಲಿ ಪಂದ್ಯಗಳು ನಡೆಯುತ್ತಿವೆ.

ಎಲ್ಲಾ ತಂಡಗಳು ಈಗಾಗಲೇ ಟಿಕೆಟ್ ಮಾರಾಟ ಆರಂಭಿಸಿವೆ. ಐಪಿಎಲ್‌ನ ಜನಪ್ರಿಯ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ ಟಿಕೆಟ್ ಮಾರಾಟ ಆರಂಭಿಸಿದ್ದು, ಟಿಕೆಟ್ ಬೆಲೆಯನ್ನು ನೋಡಿ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.

ಹೌದು, ನೀವು ಚಿನ್ನಸ್ವಾಮಿ ಅಂಗಳದಲ್ಲಿ ಆರ್ ಸಿಬಿ ಆಟವನ್ನು ನೋಡಬೇಕೆಂದಿದ್ದರೆ ದುಬಾರಿ ಬೆಲೆ ತೆರಲು ಸಿದ್ಧವಾಗಬೇಕು. ಯಾಕೆಂದರೆ ಐಪಿಎಲ್ ಪಂದ್ಯದ ಟಿಕೆಟ್ ಮಾರಾಟ ಆರಂಭವಾಗುವುದೇ 2310 ರುಪಾಯಿಗಳಿಂದ.

ಏಪ್ರಿಲ್ 2ರಂದು ಆರ್‌ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸೆಣೆಸಲಿದೆ. ಎರಡು ಬಲಿಷ್ಟ ತಂಡಗಳ ನಡುವಿನ ಕದನವನ್ನು ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ಟಿಕೆಟ್ ದರವನ್ನು ನೋಡಿ ಅಭಿಮಾನಿಗಳು ಕೋಪಗೊಂಡಿದ್ದಾರೆ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಮನೆಯಲ್ಲೇ ಮ್ಯಾಚ್ ನೋಡ್ತಿವಿ

ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಟಿಕೆಟ್ ದರ 2310 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಗರಿಷ್ಠ ದರ 42350 ರುಪಾಯಿಗಳಿಷ್ಟಿದೆ. ಈ ಟಿಕೆಟ್ ದರ ನೋಡಿ ಅಭಿಮಾನಿಗಳು ಈ ಬಾರಿ ಐಪಿಎಲ್ ಪಂದ್ಯಗಳನ್ನು ಮನೆಯಲ್ಲೇ ನೋಡಿದ್ರಾಯ್ತು ಎಂದಿದ್ದಾರೆ.

ಇನ್ನು ಕೆಲವು ಅಭಿಮಾನಿಗಳು ಆರ್ ಸಿಬಿ ಫ್ರಾಂಚೈಸಿಯನ್ನು ಟ್ರೋಲ್ ಮಾಡಿದ್ದಾರೆ. ಒಬ್ಬ ಅಭಿಮಾನಿ ಟ್ವಿಟರ್ ನಲ್ಲಿ “ನನ್ನ ಕಿಡ್ನಿ ತೆಗೆದುಕೊಂಡು ಟಿಕೆಟ್ ಕೊಡಿ” ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ಉಳಿದ ಫ್ರಾಂಚೈಸಿಗಳು ತಮ್ಮ ತಂಡದ ಪಂದ್ಯಗಳ ಟಿಕೆಟ್ ಬೆಲೆಯನ್ನು 900 ರುಪಾಯಿಗಳಿಂದ ಆರಂಭಿಸಿವೆ, ಆದರೆ ಆರ್ ಸಿಬಿ ಮಾತ್ರ ದುಬಾರಿ ಬೆಲೆಗೆ ಮಾರುತ್ತಿದೆ ಎಂದು ಹೇಳಿದ್ದಾರೆ. ಆರ್ ಸಿಬಿ ತನ್ನ ಅಭಿಮಾನಿಗಳನ್ನು ಲೂಟಿ ಮಾಡಲು ನಿರ್ಧರಿಸಿದೆ, ಟಿಕೆಟ್ ಬೆಲೆ ಇಷ್ಟೊಂದು ದುಬಾರಿಯಾದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

ಆರ್ ಸಿಬಿ ತವರಿನ ಪಂದ್ಯಗಳಿಗೆ ಆನ್‌ಲೈನ್ ಟಿಕೆಟ್ ಮಾರಾಟ ಇಂದು ಆರಂಭವಾಗಿದೆ. ಆದರೆ ಆಫ್‌ಲೈನ್ (ಬಾಸ್ ಆಫೀಸ್ ಮಾರಾಟ) ಮಾರ್ಚ್ 18 ಮತ್ತು 19 ರಂದು ಬೆಳಿಗ್ಗೆ 10:30 ರಿಂದ ರಾತ್ರಿ 8:30 ರವರೆಗೆ ನಡೆಯುತ್ತಿದೆ.

ಕೆಲವೇ ಗಂಟೆಗಳಲ್ಲಿ ಟಿಕೆಟ್‌ಗಳು ಸೋಲ್ಡ್ ಔಟ್

ದುಬಾರಿ ಟಿಕೆಟ್ ದರ ಇದ್ದರೂ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಆರ್ ಸಿಬಿ-ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿಬಿ -ಸಿಎಸ್‌ಕೆ ನಡುವಿನ ಪಂದ್ಯದ ಟಿಕೆಟ್‌ಗಳು ಕೆಲವೇ ಗಂಟೆಗಳಲ್ಲಿ ಮಾರಾಟವಾಗಿವೆ. 3 ವರ್ಷಗಳ ಬಳಿಕ ತವರಿನಲ್ಲಿ ಆಡಲು ಬರುತ್ತಿರುವ ತಂಡಕ್ಕೆ ಬೆಂಬಲ ನೀಡಲು ಅಭಿಮಾನಿಗಳು ಕಾತರಗೊಂಡಿದ್ದಾರೆ.

You May Also Like