ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರಿಗೆ KSRTC ಎಲೆಕ್ಟ್ರಿಕ್ ಬಸ್ ಸೇವೆ

ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರಿಗೆ KSRTC ಎಲೆಕ್ಟ್ರಿಕ್ ಬಸ್ ಸೇವೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ವಿಧಾನಸೌಧದ ಮುಂಭಾಗ ಕೆ.ಎಸ್.ಆರ್.ಟಿ.ಸಿ. ಅಂತರ ಜಿಲ್ಲಾ ಪವರ್ ಪ್ಲಸ್ ಬಸ್ ಗಳು ಹಾಗೂ ಸಾರಿಗೆ ಇಲಾಖೆಯ ಬೋಲೆರೋ ಜೀಪ್ ಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ.

ಕೆಎಸ್‌ಆರ್ಟಿಸಿ ವತಿಯಿಂದ ಬೆಂಗಳೂರು -ಮೈಸೂರು ನಡುವೆ ಪ್ರಾಯೋಗಿಕವಾಗಿ ಕಾರ್ಯಾಚರಣೆ ನಡೆಸುತ್ತಿರುವ ವಿದ್ಯುತ್ ಚಾಲಿತ ಬಸ್ ಸಂಚಾರ ಯಶಸ್ವಿಯಾಗಿದ್ದು, ಬೇರೆ ಬೇರೆ ಮಾರ್ಗಗಳಲ್ಲಿ ಹೊಸದಾಗಿ 25 ಬಸ್ ಗಳ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.

ಬೆಂಗಳೂರು -ಮೈಸೂರು -ಮಡಿಕೇರಿ -ವಿರಾಜಪೇಟೆವರೆಗೆ ಇವಿ ಪವರ್ ಪ್ಲಸ್ ಬಸ್ ಗಳು ಸಂಚರಿಸಲಿವೆ. ಮುಂದಿನ ಹಂತದಲ್ಲಿ ಬೆಂಗಳೂರು -ಶಿವಮೊಗ್ಗ, ಬೆಂಗಳೂರು -ದಾವಣಗೆರೆ, ಬೆಂಗಳೂರು -ಚಿಕ್ಕಮಗಳೂರು ಮಾರ್ಗಗಳಲ್ಲಿ ಕೆಎಸ್‌ಆರ್ಟಿಸಿ ಇವಿ ಪವರ್ ಪ್ಲಸ್ ಗಳು ಕಾರ್ಯಾಚರಣೆ ಆರಂಭಿಸಲಿವೆ.

ಬೆಂಗಳೂರು, ಮೈಸೂರಿನಲ್ಲಿ ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರ ಸ್ಥಾಪಿಸಿದ್ದು, ವಿರಾಜಪೇಟೆ, ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ನಗರಗಳಲ್ಲಿಯೂ ವಿದ್ಯುತ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ಪ್ರತಿ ಚಾರ್ಜ್ ಗೆ 300 ಕಿಲೋ ಮೀಟರ್ ಕ್ರಮಿಸುವ ಕೆಎಸ್‌ಆರ್ಟಿಸಿ ಇವಿ ಪವರ್ ಪ್ಲಸ್ 45 ಆಸನ, ಸಿಸಿಟಿವಿ ಕ್ಯಾಮರಾ, ಎಮರ್ಜೆನ್ಸಿ ಬಟನ್, ಅಗ್ನಿಶಾಮಕ ಸಾಧನ, ಪ್ರಥಮ ಚಿಕಿತ್ಸೆ ಕಿಟ್, ಕಿಟಕಿ ಗಾಜು ಒಡೆಯಲು ಸುತ್ತಿಗೆ ಮುಂತಾದ ಸುರಕ್ಷತಾ ಉಪಕರಣಗಳನ್ನು ಅಳವಡಿಸಲಾಗಿದೆ. ಎರಡರಿಂದ ಮೂರು ಗಂಟೆಗಳಲ್ಲಿ ಬ್ಯಾಟರಿ ಚಾರ್ಜ್ ಮಾಡಬಹುದು. ಹಂತ ಹಂತವಾಗಿ ಕೆಎಸ್‌ಆರ್ಟಿಸಿ 350 ಇವಿ ಪವರ್ ಪ್ಲಸ್ ಬಸ್ ಗಳನ್ನು ಸೇರ್ಪಡೆಗೊಳಿಸುವ ಯೋಜನೆ ಹೊಂದಿದೆ.

You May Also Like