(ಸಾಂದರ್ಭಿಕ ಚಿತ್ರ)
ಈಗಾಗಲೇ ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಪೂರ್ವ ಮುಂಗಾರು ಆರಂಭವಾಗಿದೆ.
ಬೀದರ್, ಕಲಬುರಗಿ, ಯಾದಗಿರಿ ಭಾಗದಲ್ಲಿ ಆಲಿಕಲ್ಲು ಮಳೆಯಾಗಿತ್ತು. ಎರಡು ದಿನದಿಂದ ಬಿಡುವು ಪಡೆದುಕೊಂಡಿದ್ದ ಮಳೆರಾಯ ಇಂದಿನಿಂದ ಮತ್ತೆ ಅಬ್ಬರಿಸಲಿದ್ದಾನೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಹಾಸನ ಮತ್ತು ಮೈಸೂರು ಭಾಗದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮಾರ್ಚ್ 27, 28 ಮತ್ತು 29ರಂದು ರಾಜ್ಯದ ಹಲವೆಡೆ ಮಳೆಯಾಗಲಿದೆ. ಕೊಡಗು, ಬೀದರ್, ಕಲಬುರಗಿ, ರಾಯಚೂರು ಮತ್ತು ಬೀದರ್ ಭಾಗದಲ್ಲಿ ಹಗುರು ಮಳೆಯಾಗುವ ನಿರೀಕ್ಷೆಗಳಿವೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ಹವಾಮಾನ ಬದಲಾಗುತ್ತಿದೆ. ಬೇಸಿಗೆ ಆರಂಭವಾಗಿದ್ರೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಸೆಕೆ ಪ್ರಮಾಣ ಏರಿಕೆಯಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಇಂದು ಬೆಳಗಿನ ಜಾವ ಆರ್ಟಿ ನಗರ, ಹೆಬ್ಬಾಳ, ಯಲಹಂಕ, ಯಶವಂತಪುರ ಮತ್ತು ವಿಧಾನಸೌಧದ ಸುತ್ತಮುತ್ತ ಮಳೆಯಾಗಿದೆ.
ಇಂದು ಬೆಂಗಳೂರಿನಲ್ಲಿ ಗರಿಷ್ಠ 34 ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇಂದು ಮಧ್ಯಾಹ್ನದ ನಂತರ ಕೆಲ ಭಾಗಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆಗಳಿವೆ.
ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಸಹ ಎರಡು ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.