ಅಧಿಕ ಉಷ್ಣಾಂಶ: ಮುನ್ನೆಚ್ಚರಿಕೆಗೆ ಸೂಚನೆ

ಅಧಿಕ ಉಷ್ಣಾಂಶ: ಮುನ್ನೆಚ್ಚರಿಕೆಗೆ ಸೂಚನೆ

ಬೆಂಗಳೂರು: ಅಧಿಕ ಉಷ್ಣಾಂಶದ ಕಾರಣ ಮುಂದಿನ ಕೆಲ ದಿನಗಳು ಮಕ್ಕಳು, ವೃದ್ಧರು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕು. ಅನಾರೋಗ್ಯ ಕಾಣಿಸಿಕೊಂಡಲ್ಲಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಈ ಅವಧಿಯಲ್ಲಿ ಅತಿನೇರಳೆ ಕಿರಣಗಳು ತೀಕ್ಷ್ಣವಾಗಿರುತ್ತವೆ.

ಆದ್ದರಿಂದ ಮಕ್ಕಳು ಹಾಗೂ ವೃದ್ಧರ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಸಾಂಕ್ರಾಮಿಕ ರೋಗತಡೆಗೆ ಶುದ್ಧ ನೀರು ಕುಡಿಯುವುದು ಬಹಳ ಮುಖ್ಯ. ರಸ್ತೆ ಬದಿಯಲ್ಲಿ ತೆರೆದಿಟ್ಟ ಆಹಾರ ಪದಾರ್ಥ ಹಾಗೂ ಕತ್ತರಿಸಿದ ಹಣ್ಣುಗಳನ್ನು ತಿನ್ನುವುದರಿಂದ ರೋಗಾಣುಗಳು ಹರಡಿ, ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಇಲಾಖೆ ಹೇಳಿದೆ.

ಮಕ್ಕಳನ್ನು ಶಾಖದ ಅಲೆಯಿಂದ ರಕ್ಷಿಸಲು ನಿಂಬೆ ಹಣ್ಣಿನ ರಸ ಸೇರಿಸಿದ ನೀರು, ಮಜ್ಜಿಗೆ, ಎಳನೀರು, ತಾಜಾ ಹಣ್ಣಿನ ರಸ ನೀಡಬೇಕು. ತಿಳಿ ಬಣ್ಣದ, ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ತಾಜಾ ಹಣ್ಣುಗಳು, ಸಲಾಡ್‌ಗಳು, ಮನೆಯಲ್ಲಿ ತಯಾರಿಸಿದ ಊಟ ಸೇವಿಸಬೇಕು. ಹೊರಗಿನ ಆಹಾರ ಸುರಕ್ಷಿತವಲ್ಲ. ಮಧ್ಯಾಹ್ನ 12ರಿಂದ ಸಂಜೆ 4 ಗಂಟೆ ಅವಧಿಯಲ್ಲಿ ಆದಷ್ಟೂ ಒಳಾಂಗಣ ಪ್ರದೇಶದಲ್ಲಿ ಇರಬೇಕು ಎಂದು ತಿಳಿಸಿದೆ.

ಮಕ್ಕಳಲ್ಲಿ ನಿರಂತರ ತಲೆನೋವು, ವಾಕರಿಕೆ, ಎದೆನೋವು, ಉಸಿರಾಟದ ತೊಂದರೆ ಇದ ಕಾಣಿಸಿಕೊಂಡರೆ ವೈದ್ಯರ ಬಳಿ ಕರೆದೊಯ್ಯಬೇಕು. ಆಹಾರ ಸೇವಿಸುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಲು ಸೂಚಿಸಬೇಕು ಎಂದು ಇಲಾಖೆ ಹೇಳಿದೆ.

You May Also Like