ಐತಿಹಾಸಿಕ ಬೆಂಗಳೂರು ಕರಗಕ್ಕೆ ಕ್ಷಣಗಣನೆ, 5 ಲಕ್ಷಕ್ಕೂ ಹೆಚ್ಚು ಜನರ ನಿರೀಕ್ಷೆ

Bengaluru Karaga: ಐತಿಹಾಸಿಕ ಬೆಂಗಳೂರು ಕರಗಕ್ಕೆ ಕ್ಷಣಗಣನೆ, 5 ಲಕ್ಷಕ್ಕೂ ಹೆಚ್ಚು ಜನರ ನಿರೀಕ್ಷೆ

ಬೆಂಗಳೂರು, ಏಪ್ರಿಲ್. 06: ಐತಿಹಾಸಿಕ ಬೆಂಗಳೂರಿನ ಪ್ರಮುಖ ಕರಗ ಉತ್ಸವಕ್ಕೆ 5 ಲಕ್ಷಕ್ಕೂ ಹೆಚ್ಚು ಜನರು ಸಾಕ್ಷಿಯಾಗುವ ನಿರೀಕ್ಷೆಯಿದೆ. ಕರಗಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಹಿಂದೂ ಪಂಚಾಂಗದ ಪ್ರಕಾರ ಚಿತ್ರ ಪೌರ್ಣಮಿಯಂದು ಗುರುವಾರ ಮಧ್ಯರಾತ್ರಿ ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಆರಂಭವಾಗಲಿದೆ.

ಈಗಾಗಲೇ ಗುರುವಾರ ಬೆಳಗ್ಗೆ 10.30 ಕ್ಕೆ ಕಬ್ಬನ್ ಪಾರ್ಕ್‌ನಲ್ಲಿರುವ ಕರಗದ ಕುಂಟೆಯಲ್ಲಿ ದ್ರೌಪದಿ ದೇವಿಗೆ ಅರಿಶಿನ ಬಣ್ಣದ ಸೀರೆ ಉಟ್ಟು ಬಳೆಗಳನ್ನು ತೊಟ್ಟ ಕರಗ ಹೊತ್ತ ಅರ್ಚಕರು ಗಂಗಾಪೂಜೆ ಸಲ್ಲಿಸಿದ್ದಾರೆ. ಇಲ್ಲಿಂದ ಹಸಿ ಕರಗವನ್ನು ಮಂಟಪಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಗುರುವಾರ ಮಧ್ಯರಾತ್ರಿ 12.30ಕ್ಕೆ ಕರಗದ ಮೆರವಣಿಗೆ ದೇವಸ್ಥಾನದಿಂದ ಹೊರ ಬರಲಿದೆ.

ಪ್ರತಿ ವರ್ಷ ಲಕ್ಷಾಂತರ ಮಂದಿ ಕರಗವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಇತಿಹಾಸ ಪ್ರಸಿದ್ಧ ಕರಗವನ್ನು ಕೊರೊನಾ ಸಮಯದಲ್ಲಿ ಜನರ ದರ್ಶನಕ್ಕೆ ಅವಕಾಶ ನಿಡದೇ ನಡೆಸಲಾಗಿತ್ತು. ಕೋವಿಡ್ ಬಳಿಕ ಮತ್ತೆ ಕರಗ ಉತ್ಸವಕ್ಕೆ ಹೊಸ ಚೈತನ್ಯ ಬಂದಿದ್ದು, ಜನರು ಉತ್ಸಾಹದಿಂದ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಲಕ್ಷಾಂತರ ಜನರು ಭಾಗವಹಿಸುವ ಕಾರಣ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಾಗಿದೆ. ಕರಗ ಮೆರವಣಿಗೆಗೆ ಸುಮಾರು 6 ರಿಂದ 8 ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದು ಕರಗಹ ಸಮಿತಿ ಮಾಹಿತಿ ನೀಡಿದೆ.

ಹೆಚ್ಚಿನ ಜನ ಸೇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಕರಗ ಉತ್ಸವಕ್ಕೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಉತ್ಸವದಲ್ಲಿ ಯಾವುದೇ -ಅಹಿತಕರ ಘಟನೆ ನಡೆಯದಂತೆ ಹಲವು ಕಡೆಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಸಲಾಗಿದೆ. ಕರಗ ಹೊರಡುವ ಮಾರ್ಗದ ರಸ್ತೆ, ಪಾದಚಾರಿ ಮಾರ್ಗಗಳು, ಒಳಚರಂಡಿಗಳ ದುರಸ್ಥಿ ಕಾರ್ಯ ನಡೆಸಲಾಗಿದೆ. ಉತ್ಸವಕ್ಕೆ ಬರುವ ಸಾರ್ವಜನಿಕರ ಉಪಯೋಗಕ್ಕಾಗಿ ಇ-ಶೌಚಾಲಯಗಳ ವ್ಯವಸ್ಥೆ ಮಡಲಾಗಿದೆ. ಸಂಚಾರ ದಟ್ಟಣೆಯಾಗದಂತೆ ವಾಹನಗಳ ನಿಲುಗಡೆಗೆ ಸ್ಥಳಗಳನ್ನು ನಿಗದಿ ಪಡಿಸಲಾಗಿದೆ.

ಪುಷ್ಪ ಕರಗವನ್ನು ಕಳೆದ 12 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಅರ್ಚಕ ಜ್ಞಾನೇಂದ್ರ ವಹ್ನಿಕುಲ ಗೌಡ ಅವರು ಈ ಬಾರಿಯೂ ನೆರವೇರಿಸಲಿದ್ದಾರೆ. ಕರಗದ ಮೆರವಣಿಗೆಯು ಕಬ್ಬನ್‌ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ, ಬಳೆಪೇಟೆ, ದೊಡ್ಡಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ, ಹಲಸೂರು, ಕೆಆರ್‌ಮಾರುಕಟ್ಟೆ, ಕಾಟನ್‌ಪೇಟೆ ಮತ್ತಿತರ ಪ್ರದೇಶಗಳಲ್ಲಿ ಸುಮಾರು 38 ಕಿ.ಮೀ. ಸಂಚರಿಸಲಿದೆ. 10 ಸಾವಿರಕ್ಕೂ ಹೆಚ್ಚು ಮಹಿಳಾ ಭಕ್ತರು ಆರತಿ ದೀಪೋತ್ಸವವನ್ನು ನೆರವೇರಿಸಲಿದ್ದಾರೆ.

ಹಜರತ್ ತವಕ್ಕಲ್ ಮಸ್ತಾನ್ ಸಾಹೇಬ್ ದರ್ಗಾಕ್ಕೆ ಕೆಗ ತೆರಳುವುದಕ್ಕೆ ಕೆಲವು ಬಲಪಂಥೀಯ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದ್ದು, ಧಾರ್ಮಿಕ ಸೌಹಾರ್ದತೆಯ ದ್ಯೋತಕವಾಗಿದ್ದು, ಯಾವುದೇ ಬದಲಾವಣೆಯಿಲ್ಲದೆ ಆಚರಣೆ ಮುಂದುವರಿಯಲಿದೆ ಎಂದು ಬೆಂಗಳೂರು ಕರಗ ಸಮಿತಿ ಸ್ಪಷ್ಟಪಡಿಸಿದೆ.

You May Also Like