ಮೈಸೂರು : ಕುತೂಹಲ ಕೆರಳಿಸಿರುವ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಗುರುವಾರ ಕಾಂಗ್ರೆಸ್ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಪಕ್ಷವು ಮಾವಿನಹಳ್ಳಿ ಸಿದ್ದೇಗೌಡ ಅವರನ್ನು ಜನತಾದಳ (ಜಾತ್ಯತೀತ) ನಾಯಕ ಜಿ.ಟಿ.
ದೇವೇಗೌಡರ ವಿರುದ್ಧ ಕಣಕ್ಕೆ ಇಳಿಸಿದೆ. ಆದರೆ, ಇದು ಮಾವಿನಹಳ್ಳಿ ಸಿದ್ದೇಗೌಡ ಮತ್ತು ಜಿ.ಟಿ. ದೇವೇಗೌಡರ ನಡುವಿನ ಸ್ಪರ್ಧೆ ಎನ್ನುವುದಕ್ಕಿಂತ ಸಿದ್ದರಾಮಯ್ಯ- ಜಿಟಿಡಿ ನಡುವಿನ ಸ್ಪರ್ಧೆ ಎನ್ನಬಹುದು.
ಸಾಮಾನ್‌ಉವಾಗಿ ಜಿಟಿಡಿ ಎಂದು ಕಡೆಸಿಕೊಳ್ಳುವ ಜಿ.ಟಿ ದೇವೇಗೌಡ ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಸುಮಾರು 36,000 ಮತಗಳಿಂದ ಸೋಲಿಸಿ ಭರ್ಜರಿ ಗೆಲುವು ದಾಖಲಿಸಿದ್ದರು. ಹೀಗಾಗಿಯೇ ಕಾಗದದಲ್ಲಿ ಜಿಟಿಡಿ ಮತ್ತು ಸಿದ್ದೇಗೌಡರ ನಡುವಿನ ಸ್ಪರ್ಧೆಯಾದರೂ, ವಾಸ್ತವದಲ್ಲಿ 2018ರ ಸೋಲಿನ ಸೇಡು ತೀರಿಸಿಕೊಳ್ಳಲು ಉತ್ಸುಕರಾಗಿರುವ ಜಿಟಿಡಿ ಮತ್ತು ಸಿದ್ದರಾಮಯ್ಯ ಅವರ ನಡುವಿನ ವೈಯುಕ್ತಿಕ ಕದನ ಎಂದು ತಿಳಿಯಲಾಗಿದೆ.
ಬಿಜೆಪಿಈವೆರೆಗೆ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಇಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸದಿದ್ದರೂ, ಚಾಮುಂಡೇಶ್ವರಿ ಕ್ಷೇತ್ರದ ಮಟ್ಟಿಗೆ ಇದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಎಂದು ಪರಿಗಣಿಸಲಾಗುತ್ತದೆ.
ಮರಿಗೌಡರಂತಹ ಕೆಲವುಸಿದ್ದರಾಮಯ್ಯನಿಷ್ಠಾವಂತರು ಸೇರಿದಂತೆ ಸುಮಾರು 13 ಆಕಾಂಕ್ಷಿಗಳಿದ್ದೂ ಕೂಡ ಕಾಂಗ್ರೆಸ್ ನಾಯಕರು ಇವರನ್ನೆಲ್ಲಾ ಬದಿಗಿಟ್ಟಿದ್ದಾರೆ. ಬದಲಿಗೆ ಇತ್ತೀಚಿನವರೆಗೂ ಜಿಟಿಡಿ ಅವರ ಆಪ್ತರಾಗಿದ್ದ ಮಾವಿನಹಳ್ಳಿ ಸಿದ್ದೇಗೌಡರನ್ನು ಕಣಕ್ಕಿಳಿಸಿದ್ದಾರೆ.
ಯೆಲ್ವಾಲ್ ಮತ್ತು ಜಯಪುರದಲ್ಲಿ ಮತಗಳನ್ನು ಹೊಂದಿರುವ ಮಾವಿನಹಳ್ಳಿ ಸಿದ್ದೇಗೌಡ ಎರಡು ತಿಂಗಳ ಹಿಂದೆ ಜಿಟಿಡಿ ಅವರ ರಾಜಕೀಯ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ನಂತರ ತಮ್ಮ ನಿಲುವನ್ನು ಹಿಂತೆಗೆದುಕೊಂಡು ಕಾಂಗ್ರೆಸ್‌ನತ್ತ ವಾಲಿದರು. ಜೆಡಿಎಸ್‌ನಿಂದ ಜಿಟಿಡಿ ಪಕ್ಷಾಂತರವಾದರೇ ತಮಗೆ ಬಿ ಫಾರ್ಮ್‌ಗಾಗಿ ಹಕ್ಕು ಸಾಧಿಸಲು ಮತ್ತು ಚುನಾವಣೆಗೆ ಸ್ಪರ್ಧಿಸಲು ಹಾದಿ ಸುಗಮವಾಗುತ್ತದೆ ಎಂದು ಸಿದ್ದೇಗೌಡ ಭಾವಿಸಿದ್ದರು.
ಆದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಇತರ ಜೆಡಿಎಸ್ ನಾಯಕರು, ಜಿಟಿಡಿ ಅವರನ್ನು ಸಂಪೂರ್ಣವಾಗಿ ಸಮಾಧಾನಪಡಿಸಿದ್ದಾರೆ. ಜೊತೆಗೆ ಅವರ ಮನೆಗೂ ತೆರಳಿ ಔತಣಕೂಟದಲ್ಲಿ ಭಾಗಿಯಾಗಿದ್ದರು. ಇದಕ್ಕೆ ತಮ್ಮ ಮನೆಗೆ ಖುದ್ದಾಗಿ ಭೇಟಿ ನೀಡಿ ಭೋಜನ ಸವಿದಿದ್ದ ಮಾಜಿ ಪ್ರಧಾನಿಗೆ ತಾನು ಸದಾ ಋಣಿಯಾಗಿದ್ದೇನೆ ಎಂದು ಜಿಟಿಡಿ ಭಾವನಾತ್ಮಕವಾಗಿ ಮಾತನಾಡಿದ್ದರು.
ಸದ್ಯ ಜಿಟಿಡಿ ಅವರಿಗೆ ಚಾಮುಂಡೇಶ್ವರಿಯಿಂದ ಟಿಕೆಟ್ ಖಚಿತವಾಗಿರುವುದು ಮಾತ್ರವಲ್ಲದೆ ಹುಣಸೂರಿನಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ತಮ್ಮ ಪುತ್ರ ಹರೀಶ್ ಗೌಡ ಅವರಿಗೆ ಟಿಕೆಟ್ ಕೊಡಿಸಲು ಭಾರಿ ಪ್ರಯತ್ನ ನಡೆಸಿದ್ದರು. ಹೀಗಾಗಿ ನಿರಾಶೆಗೊಂಡ ಸಿದ್ದೇಗೌಡರು ತಮ್ಮ ರಾಜಕೀಯ ಬೆಳವಣಿಗೆಯ ಹಾದಿ ಈಗ ಜೆಡಿಎಸ್‌ನಲ್ಲಿ ಮುಚ್ಚಿಹೋಗಿದೆ ಎಂದು ತಿಳಿದು, ಕಳೆದ ತಿಂಗಳು ಸಿದ್ದರಾಮಯ್ಯ ಮತ್ತು ಇತರರು ಭಾಗವಹಿಸಿದ್ದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಸಿದ್ದೇಗೌಡ ಅವರು ಜೆಡಿಎಸ್‌ಗೆ ಪ್ರವೇಶಿಸುವ ಮೊದಲು ಕಾಂಗ್ರೆಸ್‌ನೊಂದಿಗೆ ಇದ್ದು, ಈ ಹಿಂದೆ ಮೈಮುಲ್ ನಿರ್ದೇಶಕರಾಗಿದ್ದರು.
ಇತ್ತ, 2018 ರಲ್ಲಿ ಜಿಟಿಡಿಯಿಂದ ಉಂಟಾದ ಹೀನಾಯ ಸೋಲಿನಿಂದ ಇನ್ನೂ ಚುರುಕಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸಿದ್ದೇಗೌಡ ಮತ್ತು ಇತರರನ್ನು ಕಾಂಗ್ರೆಸ್ ತೆಕ್ಕೆಗೆ ವೈಯಕ್ತಿಕವಾಗಿ ಬರಮಾಡಿಕೊಂಡರು. ಸಾರ್ವಜನಿಕ ಸಭೆಯಲ್ಲಿ ಭಾವುಕರಾಗಿ ಮಾತನಾಡಿದ್ದ ಸಿದ್ದರಾಮಯ್ಯ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಸೋಲಿಸುವಂತೆ ಕರೆ ನೀಡಿದ್ದರು.