ಆಯೋಗದಿಂದ 7 ಮಂದಿ ಚುನಾವಣಾ ವೆಚ್ಚ ವೀಕ್ಷಕರ ನೇಮಕ

ತುಮಕೂರು: ಭಾರತ ಚುನಾವಣಾ ಆಯೋಗವು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ 7 ಮಂದಿ ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಕ ಮಾಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ತ್ಶರಿಂಗ್ ಜೋರ್ಡನ್ ಭೂಟಿಯಾ, ತಿಪಟೂರಿಗೆ ರೆಡ್ನಮ್ ವೆಂಕ ಪ್ರಧಾಮೇಶ್ ಭಾನು, ತುರುವೇಕೆರೆ ಹಾಗೂ ಗುಬ್ಬಿ ಕ್ಷೇತ್ರಕ್ಕೆ ನವಾಬ್ ಸಿಂಗ್, ಕುಣಿಗಲ್ ಕ್ಷೇತ್ರಕ್ಕೆ ಮಯಂಕ್ ಶರ್ಮ, ತುಮಕೂರು ನಗರ ಹಾಗೂ ಗ್ರಾಮೀಣ ಕ್ಷೇತ್ರಕ್ಕೆ ಎಫ್.ಎ.ಯಸ್ಸರ್ ಹರಾಫತ್, ಕೊರಟಗೆರೆ ಹಾಗೂ ಮಧುಗಿರಿ ಕ್ಷೇತ್ರಕ್ಕೆ ಎಂ.ಸ್ವಾಮಿನಾಥನ್, ಶಿರಾ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರಕ್ಕೆ ಸತೇಂದ್ರ ಸಿಂಗ್ ಮೆಹ್ರಾ ಅವರನ್ನು ಆಯೋಗದಿಂದ ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ನೇಮಿಸಲಾಗಿದೆ. ನೇಮಕವಾದ ವೆಚ್ಚ ವೀಕ್ಷಕರು ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 12/13ರಂದು ಆಗಮಿಸಲಿದ್ದು, ಚುನಾವಣಾ ವೆಚ್ಚ ವೀಕ್ಷಕರ ವಾಸ್ತವ್ಯಕ್ಕಾಗಿ ಆಯಾ ಪ್ರವಾಸಿ ಮಂದಿರದಲ್ಲಿ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಅವರು ಸೂಚನೆ ನೀಡಿದರು.
ಪ್ರತಿ ಚುನಾವಣಾ ವೆಚ್ಚ ವೀಕ್ಷಕರಿಗೆ ಒಬ್ಬ ಲೈಸನ್ ಅಧಿಕಾರಿ, ಡೇಟಾ ಎಂಟ್ರಿ ಆಪರೇಟರ್, ಗನ್‌ಮ್ಯಾನ್‌ಗಳನ್ನು ನೇಮಕ ಮಾಡಲಾಗಿದೆ. ವೆಚ್ಚ ವೀಕ್ಷಕರ ಚುನಾವಣಾ ಕೆಲಸ-ಕಾರ್ಯಗಳಿಗಾಗಿ ಕಂಪ್ಯೂಟರ್, ಲ್ಯಾಪ್‌ಟಾಪ್, ಪ್ರಿಂಟರ್, ಇಂಟರ್‌ನೆಟ್ ವ್ಯವಸ್ಥೆ, ಲೇಖನ ಸಾಮಗ್ರಿಗಳ ವ್ಯವಸ್ಥೆ ಮಾಡಬೇಕೆಂದು ಎಲ್ಲಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾದ್ಯಂತ ಇಂದು(ಏಪ್ರಿಲ್ 11ರಂದು) ನಡೆಯುವ ಪಿಆರ್‌ಓ ಹಾಗೂ ಎಪಿಆರ್‌ಓಗಳ ತರಬೇತಿ ಮುಗಿದ ಕೂಡಲೇ ಜಿಲ್ಲಾ ಚುನಾಣಾಧಿಕಾರಿಗಳಿಗೆ ಕಡ್ಡಾಯವಾಗಿ ಹಾಜರಾತಿ ಮಾಹಿತಿ ಸಲ್ಲಿಸಬೇಕು. ಚುನಾವಣಾ ಕರ್ತವ್ಯದ ಆದೇಶ ಪ್ರತಿ ಜಾರಿಯಾಗಿ ಗೈರು ಹಾಜರಾದ ಅಧಿಕಾರಿ/ ನೌಕರರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರ ಮೇಲೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.
ಜಿಲ್ಲೆಯಲ್ಲಿರುವ 85742 ಗೈರು ಹಾಜರಿ ಮತದಾರರಿಗೆ ನಮೂನೆ-12ಡಿಯನ್ನು ವಿತರಿಸುವ ಕಾರ್ಯ ಕೂಡಲೇ ಪೂರ್ಣಗೊಳಿಸಬೇಕು. ಈವರೆಗೂ 57695 ಮತದಾರರಿಗೆ ನಮೂನೆ-12ಡಿ ವಿತರಣೆ ಮಾಡಲಾಗಿದ್ದು, ಉಳಿದ ಮತದಾರರಿಗೆ ಏಪ್ರಿಲ್ 17/18ರೊಳಗಾಗಿ ವಿತರಿಸಬೇಕು ಎಂದರಲ್ಲದೆ, ನಮೂನೆ-12ಡಿ ವಿತರಣಾ ಕಾರ್ಯವನ್ನು ಪೂರ್ಣಗೊಳಿಸಿರುವ ಗುಬ್ಬಿ ವಿಧಾನಸಭಾ ಕ್ಷೇತ್ರದ ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳಿಗೆ ಸಂಬ0ಧಿಸಿದ0ತೆ ಸಿ-ವಿಜಿಲ್ ಮೊಬೈಲ್ ಆಪ್ ಮೂಲಕ ಈವರೆಗೂ ಕೇವಲ 25 ದೂರುಗಳು ಮಾತ್ರ ಸ್ವೀಕೃತವಾಗಿದ್ದು, ಎಲ್ಲಾ ದೂರುಗಳನ್ನು ವಿಲೇ ಮಾಡಲಾಗಿದೆ. ಸಿ-ವಿಜಿಲ್ ಆಪ್ ಮೂಲಕ ಸಾರ್ವಜನಿಕ ದೂರು ಸಲ್ಲಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದು ತಿಳಿಸಿದರು.
ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಎಫ್‌ಎಸ್‌ಟಿ/ಎಸ್‌ಎಸ್‌ಟಿ ತಂಡಗಳಿಗೆ ಒದಗಿಸಿರುವ 145 ವಾಹನಗಳಿಗೆ ಜಿಪಿಎಸ್ ಅಳವಡಿಸುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯನ್ನು ಯಾವುದೇ ಲೋಪದೋಷವಿಲ್ಲದಂತೆ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಸೇರಿ 104 ಹ್ಯಾಂಡಿ ಕ್ಯಾಮ್‌ಗಳನ್ನು ಬಳಕೆ ಮಾಡಲಾಗುತ್ತಿದ್ದು, ಸಂಬ0ಧಿಸಿದ ಚೆಕ್ ಪೋಸ್ಟ್ ಹಾಗೂ ಎಫ್‌ಎಸ್‌ಟಿ ತಂಡಗಳಿಗೆ ಈಗಾಗಲೇ ಹ್ಯಾಂಡಿ ಕ್ಯಾಮ್‌ಗಳನ್ನು ವಿತರಣೆ ಮಾಡಲಾಗಿದೆ. ನಿಯೋಜಿತ ಎಫ್‌ಎಸ್‌ಟಿ/ಎಸ್‌ಎಸ್‌ಟಿ ತಂಡಗಳು ಚುನಾವಣಾ ಅಕ್ರಮಗಳು ಕಂಡು ಬಂದಲ್ಲಿ ಹದ್ದಿನ ಕಣ್ಣಿಟ್ಟು ಚುರುಕಾಗಿ ಕರ್ತವ್ಯ ನಿರ್ವಹಿಸಬೇಕೆಂದು ತಾಕೀತು ಮಾಡಿದರು.
ಮತದಾರರ ಪಟ್ಟಿಗೆ ಸಂಬ0ಧಿಸಿದ0ತೆ ಬಾಕಿ ಇರುವ ಸ್ವೀಕೃತ ಅರ್ಜಿ ನಮೂನೆ 6 ಮತ್ತು 8ನ್ನು ನಿಗಧಿತ ಅವಧಿಯೊಳಗೆ ವಿಲೇವಾರಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ಹೆಚ್.ವಿ. ದರ್ಶನ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹೀದಾ ಜಂಜ0, ತುಮಕೂರು ಉಪವಿಭಾಗಾಧಿಕಾರಿ ಹೆಚ್.ಶಿವಪ್ಪ, ತಹಶೀಲ್ದಾರ್ ಸಿದ್ದೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜಿನಪ್ಪ, ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ಸುಜಯ್ ಕುಮಾರ್, ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ, ಮತ್ತಿತರ ಅಧಿಕಾರಿಗಳು ಹಾಜರಿದ್ದರು.

You May Also Like