ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕ ಶಿವಕುಮಾರ್.ಕೆ.ಬಿ. ಅವರು ಇಂದು ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯಲ್ಲಿ ನವೆಂಬರ್ 23 ಹಾಗೂ 24ರಂದುಹಮ್ಮಿಕೊಂಡಿರುವ ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ಅಭಿಯಾನದ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ -193 ಚಿಕ್ಕಹಳ್ಳಿ ಹಾಗೂ ಮತಗಟ್ಟೆ ಸಂಖ್ಯೆ: -132 ಮಂಚಕಲ್ಕುಪ್ಪೆ ಶಾಲೆಗಳಿಗೆ ಭೇಟಿ ನೀಡಿ ಮತಗಟ್ಟೆ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ನಡೆಸಿದರು.
ನಂತರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಅಪರ ಜಿಲ್ಲಾಧಿಕಾರಿ ಹಾಗೂ ತುಮಕೂರು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಗೊತ್ತುಪಡಿಸಿದ ಸಹಾಯಕ ಮತದಾರರ ನೋಂದಣಾಧಿಕಾರಿಗಳು (ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು) ಅವರೊಂದಿಗೆ ಸಭೆ ನಡೆಸಿದರು.
ತುಮಕೂರು ಜಿಲ್ಲೆಯಲ್ಲಿ ಹಾಲಿ ನಡೆಯುತ್ತಿರುವ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ಸೀಕೃತವಾದ ಅರ್ಜಿಗಳು, ಮನೆ ಮನೆ ಸಮೀಕ್ಷೆಯ ಪ್ರಗತಿ ಹಾಗೂ ಇ.ಪಿ. ರೇಷಿಯೋ, ಜೆಂಡರ್ ರೇಷಿಯೋ ಮುಂತಾದ ಮತದಾರರ ಪಟ್ಟಿಯ ಸಂಬಂಧ ಸಾಧಿಸಿರುವ ಪ್ರಗತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಸೂಚನೆಗಳನ್ನು ನೀಡಿದರು ಯುವ ಮತದಾರರ ನೋಂದಣಿಗೆ ಸಂಬಂಧಿಸಿದಂತೆ ದಿನಾಂಕ: 01.01.2007 ಕ್ಕಿಂತ ಮುಂಚೆ ಜನಿಸಿದ ಯುವ ಮತದಾರರ ಮಾಹಿತಿಯನ್ನು ಪಡೆಯಲು ಕ್ರಮವಹಿಸಬೇಕು.
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಲು ಸೂಕ್ತ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಇ.ಪಿ. ರೇಷಿಯೋ ಮತ್ತು ಜೆಂಡರ್ ರೇಷಿಯೋ ಹೆಚ್ಚಾಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು. ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಂಡು, ಮರಣ ಹೊಂದಿರುವ ಮತ್ತು ಖಾಯಂ ಆಗಿ ಸ್ಥಳಾಂತರಗೊಂಡಿರುವ ಮತದಾರರನ್ನು ಗುರುತಿಸಿ, ನಿಯಮಾನುಸಾರ ಮತದಾರರ ಪಟ್ಟಿಯಿಂದ ಕೈಬಿಡಲು ಸೂಕ್ತ ಕ್ರಮವಹಿಸಬೇಕು. ಇದರಿಂದ ಇ.ಪಿ. ರೇಷಿಯೋ, ಜೆಂಡರ್ ರೇಷಿಯೋ ಸರಿಪಡಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ ಪ್ರಭು, ಅಪರ ಜಿಲ್ಲಾಧಿಕಾರಿಗಳಾದ ಡಾ: ಎನ್.ತಿಪ್ಪೇಸ್ವಾಮಿ, ಪಾಲಿಕೆ ಆಯುಕ್ತ ಅಶ್ವಿಜ, ಜಿಲ್ಲೆಯ ಎಲ್ಲಾ ಉಪವಿಭಾಗಗಳ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ಗಳು, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು, ಶಿರಾ ಮತ್ತು ತಿಪಟೂರು ನಗರಸಭೆಯ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಕಛೇರಿಯ ಚುನಾವಣಾ ಶಾಖೆಯ ತಹಶೀಲ್ದಾರ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.