ಆರ್ಎನ್ಆರ್ 15048 ಅಕ್ಕಿ ತಳಿಯನ್ನು ಅರೆ ನೀರಾವರಿ ಪ್ರದೇಶದಲ್ಲಿಯೂ ಬೆಳೆಯಬಹುದಾಗಿದೆ ಎಂದು ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರ ವಿಜ್ಞಾನಿ ತಸ್ಮಿಯಾ ಕೌಸರ್ ತಿಳಿಸಿದರು. ಜಿಲ್ಲೆಯ ತಿಪಟೂರು ತಾಲೂಕು ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆರ್ಎನ್ಆರ್ 15048 ಅಕ್ಕಿ ತಳಿಯನ್ನು ಪರಿಚಯಿಸಿ ಭತ್ತ ಬೆಳೆಯುವ ಪ್ರದೇಶವನ್ನು ಹೆಚ್ಚಿಸುವ ಉದ್ದೇಶದಿಂದ ತಿಪಟೂರು ತಾಲೂಕು ನೊಣವಿನ ಕೆರೆ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈ ಅಕ್ಕಿ ತಳಿಯು ಬೆಂಕಿ ರೋಗದ ನಿರೋಧಕ ಶಕ್ತಿಯನ್ನು ಹೊಂದಿದ್ದು, ನೀರಾವರಿ, ಅರೆ ನೀರಾವರಿ ಪ್ರದೇಶದಲ್ಲಿ ಬೆಳೆಯಬಹುದಾಗಿದೆ. ಅಲ್ಲದೆ ಏರೋಬಿಕ್ ಪದ್ಧತಿಯಲ್ಲೂ ಸಹ ಬೆಳೆಯಬಹುದಾಗಿದೆ. ಆರ್ಎನ್ಆರ್ 15048 ಅಕ್ಕಿ ತಳಿಯು ಅಲ್ಪಾವಧಿ ಬೆಳೆಯಾಗಿದ್ದು, 120-125 ದಿನಗಳಲ್ಲಿಯೇ ಕೊಯ್ಲಿಗೆ ಬರುತ್ತದೆ. ಪ್ರತಿ ಎಕರೆಗೆ 45-50 ಕ್ಷಿಂಟಾಲ್ ಇಳುವರಿ ಪಡೆಯಬಹುದು ಎಂದು ಮಾಹಿತಿ ನೀಡಿದರು.
ರೈತರು ಬಿಳಿ ಅಕ್ಕಿ ಅನ್ನ ಕಂಡರೆ ಭಯ ಬೀಳುವ ಮದುಮೇಹಿಗಳಿಗಾಗಿ ಸಕ್ಕರೆ ಅಂಶ ಕಡಿಮೆ ಇರುವ ಭತ್ತವನ್ನು ಬೆಳೆಯಲು ಆರಂಭಿಸಿದ್ದಾರೆ. ಸೋನಾ ಮಸೂರಿ ಸೇರಿದಂತೆ ಇತರೆ ಅಕ್ಕಿಗಳಿಗೆ ಹೋಲಿಸಿದರೆ ಆರ್ಎನ್ಆರ್ 15048 ಅಕ್ಕಿ ತಳಿಯಲ್ಲಿ ಕಡಿಮೆ ಗ್ಲೈಸಿಮಿಕ್ ಇಂಡೆಕ್ಸ್ (ಜಿ.ಐ-ಕಾರ್ಬೋಹೈಡ್ರೇಟ್) ಇದೆ. ಇತರೆ ತಳಿಯ ಅಕ್ಕಿ ಸಾಮಾನ್ಯವಾಗಿ ಶೇ.56.5ರಷ್ಟು ಗ್ಲೈಸಿಮಿಕ್ ಇಂಡೆಕ್ಸ್ ಹೊಂದಿದ್ದರೆ ಈ ತಳಿಯ ಅಕ್ಕಿ ಶೇ.51.5ರಷ್ಟು ಗ್ಲೈಸಿಮಿಕ್ ಇಂಡೆಕ್ಸ್ ಅನ್ನು ಹೊಂದಿದೆ. ರಾಗಿ ಹಾಗೂ ಸಿರಿಧಾನ್ಯಗಳ ರೀತಿಯಲ್ಲಿಯೇ ಆರ್.ಎನ್. ಆರ್ 15048 ಭತ್ತದ ತಳಿಯ ಅಕ್ಕಿಯು ನಿಧಾನವಾಗಿ ದೇಹಕ್ಕೆ ಸಕ್ಕರೆ ಅಂಶ ಬಿಡುಗಡೆ ಮಾಡುವ ವಿಶೇಷ ಗುಣ ಹೊಂದಿದೆ ಎಂದರಲ್ಲದೆ ಆರ್.ಎನ್.ಆರ್-15048 ತಳಿಯ ಭತ್ತದಿಂದ ತಯಾರಿಸಿದ ಅಕ್ಕಿಯು ಸೋನಾ ಮಸೂರಿಯಂತೆ ಗಾತ್ರದಲ್ಲಿಸಣ್ಣ ಹಾಗೂ ರೂಬಿ ಸ್ವಾದ ಹೊಂದಿದೆ. ಈ ತಳಿ ಅಕ್ಕಿಯು ಮಧು ಮೇಹಿಗಳಿಗೆ ಅನುಕೂಲವಾಗಿರುವುದರ ಜೊತೆಗೆ ಬೊಜ್ಜುಕರಗಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತರಾದ ಎಸ್. ವಿ.ಸ್ವಾಮಿ, ಪ್ರಕಾಶ್, ಉಮೇಶ್, ರಮೇಶ್, ವೇದಾನಂದ, ಮನು, ನಿಖಿಲ್, ಮೈತ್ರ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶೇಖರ್ ಮತ್ತು ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.