ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025ಕ್ಕೆ ಸಂಬಂಧಿಸಿದಂತೆ ಮತದಾರರ ಅನುಕೂಲಕ್ಕಾಗಿ ನವೆಂಬರ್ 23 ಹಾಗೂ 24ರಂದು ವಿಶೇಷ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಈ ವಿಶೇಷ ಆಂದೋಲನದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿ(ಬಿಎಲ್ಒ)ಗಳು ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಹಾಜರಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತು ತೆಗೆದುಹಾಕುವಿಕೆಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ.
ಸಾರ್ವಜನಿಕರು ತಮ್ಮ ನಿವಾಸ ವ್ಯಾಪ್ತಿಯ ಮತಗಟ್ಟೆಗಳ ಮತದಾರರ ಪಟ್ಟಿಯಲ್ಲಿ ತಮ್ಮ ಹಾಗೂ ತಮ್ಮ ಮನೆಯ ಸದಸ್ಯರ ಹೆಸರುಗಳು ನಮೂದಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬಹುದಾಗಿದೆ. ಮತದಾರರ ಸೇರ್ಪಡೆಗೆ ನಮೂನೆ 6, ಅನಿವಾಸಿ ಭಾರತೀಯರ ಹೆಸರುಗಳ ಸೇರ್ಪಡೆಗೆ ನಮೂನೆ 6ಎ, ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಉದ್ದೇಶಿತ ಹೆಸರಿನ ಸೇರ್ಪಡೆಗೆ ಆಕ್ಷೇಪಣೆ/ಹೆಸರು ತೆಗೆದು ಹಾಕಲು ನಮೂನೆ 7 ಮತ್ತು ಮತದಾರರ ನಿವಾಸ ಬದಲಾವಣೆ/ ಪ್ರಸ್ತುತ ಮತದಾರರ ಪಟ್ಟಿಯಲ್ಲಿನ ನಮೂದುಗಳ ತಿದ್ದುಪಡಿ/ ಯಾವುದೇ ತಿದ್ದುಪಡಿಗಳಿಲ್ಲದೆ ಬದಲಿ ಎಪಿಕ್ ನೀಡುವಿಕೆ/ ಅಂಗವಿಕಲ ವ್ಯಕ್ತಿ ಎಂದು ಗುರುತಿಸಲು ಮನವಿಗಾಗಿ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಸಾರ್ವಜನಿಕರ ಮಾಹಿತಿಗಾಗಿ ಈಗಾಗಲೇ ಅಕ್ಟೋಬರ್ 29ರಂದು ಕರಡು ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗಿದ್ದು, ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನವೆಂಬರ್ 28ರವರೆಗೆ ಕಾಲಾವಕಾಶವಿದ್ದು, ಸಾರ್ವಜನಿಕರು ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಹಾಗೂ ವಿಶೇಷ ಆಂದೋಲನದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.