ದೇಶದಲ್ಲಿ ಉಪಶಮನಕಾರಿ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯವು ಇಂದು ಅಜಿತ್ ಐಸಾಕ್ ಫೌಂಡೇಷ್ ಜತೆ ಒಪ್ಪಂದಕ್ಕೆ ಸಹಿ ಮಾಡಿದೆ. ಇದರ ಅನ್ವಯ ತುಮಕೂರಿನಲ್ಲಿ 63 ಹಾಸಿಗೆಗಳ ಉಪಶಮನಕಾರಿ ಆರೈಕೆ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಮುಂದಿನ ವರ್ಷದಿಂದ ಇದು ಕಾರ್ಯಾರಂಭ ಮಾಡಲಿದೆ.
ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಮಾರಣಾಂತಿಕ ಅನಾರೋಗ್ಯಕ್ಕೆ ಒಘಗಾದ ರೋಗಿಗಳಿಗೆ ಸಹಾನುಭೂತಿಯ, ಘನತೆಯ ಆರೈಕೆ ಸೇವೆ ಒದಗಿಸುವುದು ಇದರ ಉದ್ದೇಶ. ಸಮುದಾಯ ಆಧರಿತ ಆರೈಕೆದಾರರಿಗೆ ತರಬೇತಿ ಮತ್ತು ಅಗತ್ಯ ಬೆಂಬಲವನ್ನೂ ಈ ಕೇಂದ್ರ ಒದಗಿಸಲಿದೆ ಎಂದು ಜೆಎಚ್ಯು ಅಧ್ಯಕ್ಷ ರೋನಾಲ್ಡ್ ಜೆ.ಡೇನಿಯಲ್ಸ್ ಮತ್ತು ಎಐಎಫ್ ಸಹ ಸಂಸ್ಥಾಪಕ ಅಜಿತ್ ಐಸಾಕ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ದೇಶದಲ್ಲಿ ಸುಮಾರು 80 ಲಕ್ಷದಿಂದ ಒಂದು ಕೋಟಿ ಮಂದಿಗೆ ಉಪಶಮನಕಾರಿ ಆರೈಕೆ ಅಗತ್ಯವಿದ್ದು, ಈ ಸೌಲಭ್ಯ ಶೇಕಡ 1 ರಿಂದ 2ರಷ್ಟು ಮಂದಿಗೆ ಮಾತ್ರ ಲಭ್ಯವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂಥ ಸೇವೆಗಳು ವಿರಳವಾಗಿದ್ದು, ಈ ಸೌಲಭ್ಯ ಪಡೆಯಲು ಹಣಕಾಸು ಕೊರತೆಯೂ ಬಾಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಲಭ್ಯತೆಯನ್ನು ಹೆಚ್ಚಿಸಲು ಈ ಸಹಯೋಗ ನೆರವಾಗಲಿದೆ ಎಂದು ಪ್ರಕಟಣೆ ಹೇಳಿದೆ.
ಉಪಶಮನಕಾರಿ ಆರೈಕೆಯಲ್ಲಿ ಆನ್ಲೈನ್ ಮತ್ತು ಆಫ್ಲೈನ್ ಸಮಗ್ರ ತರಬೇತಿ ಕಾರ್ಯಕ್ರಮವನ್ನು ರೂಪಿಸಿ ಅನುಷ್ಠಾನಗೊಳಿಸುವ ಜತೆಗೆ ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಲಿದೆ. ಇದಕ್ಕೆ ಪೂರಕವಾಗಿ ಸಂಶೋಧನಾ ಫೆಲೋಶಿಪ್ ಅಭಿವೃದ್ಧಿಪಡಿಸಲು ಮತ್ತು ಪಠ್ಯಕ್ರಮ ವಿನ್ಯಾಸಗೊಳಿಸಲು ಕೂಡಾ ಜೆಎಚ್ಯು ನೆರವಾಗಲಿದೆ.