
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪ್ರಾಪಂಚಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ನಿರಂತರವಾಗಿ ಪರಿಶ್ರಮ ಪಟ್ಟಾಗ ಮಾತ್ರ ಯಶಸ್ಸು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಕರೆ ನೀಡಿದರು.
ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ಸಭಾಂಗಣದಲ್ಲಿಂದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಯಶಸ್ಸಿನ ಹಾದಿಗಳು” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದ ಅನೇಕ ದೇಶಗಳು ಅತೀ ಹೆಚ್ಚು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ್ದರೂ ಸಹ ಅಭಿವೃದ್ಧಿ ಹೊಂದಿದ ದೇಶಗಳಾಗಿ ಹೊರಬರಲು ಸಾಧ್ಯವಾಗುತ್ತಿಲ್ಲ. ಆದರೆ ಹೆಚ್ಚು ಜ್ಞಾನವುಳ್ಳ ಯುವಜನತೆಯನ್ನು ಹೊಂದಿರುವ ದೇಶಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ಜ್ಞಾನವಂತರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಯುವ ಜನತೆ ಜ್ಞಾನವಂತರಾಗಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬರಲ್ಲೂ ಸಾಧಿಸುವ ಸಾಮಾಥ್ರ್ಯವಿದ್ದು, ಸಂಕುಚಿತ ಮನೋಭಾವನೆಯನ್ನು ತೆಗೆದುಹಾಕಿ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ವಿದ್ಯಾರ್ಥಿಗಳಿಗೆ 10ನೇ ತರಗತಿ ಮುಖ್ಯ ಘಟ್ಟವಾಗಿದ್ದು, ತಮ್ಮ ಜೀವನದ ಗುರಿಯನ್ನು ಈಗಲೇ ನಿರ್ಧರಿಸಿ, ಕಠಿಣ ಪರಿಶ್ರಮದಿಂದ ಗುರಿ ತಲುಪಬೇಕು ಎಂದು ತಿಳಿಸಿದರು.

ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮನಮೋಹನ್, ಡಯಟ್ ಪ್ರಿನ್ಸಿಪಾಲ್ ಮಂಜುನಾಥ.ಕೆ., ರೀಡ್ ಬುಕ್ ಪೌಂಡೇಷನ್ ಅಧ್ಯಕ್ಷ ಎಲ್. ಕಾಡದೇವರ ಮಠ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ರೋಟರಿ ಸಂಸ್ಥೆಯ ಲೆಫ್ಟಿನೆಂಟ್ ಗೌವರ್ನರ್ ಉಮೇಶ್ ಹಾಗೂ ಪ್ರಥಮ ಮಹಿಳಾ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ, ತಾಲ್ಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ.ಪಿ, ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
–––