ಇದೇ ತಿಂಗಳ ನವೆಂಬರ್ 29 ಮತ್ತು 30ರಂದು ನಗರದ ಗಾಜಿನಮನೆಯಲ್ಲಿ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಖ್ಯಾತ ಲೇಖಕರಾದ ಅಗ್ರಹಾರ ಕೃಷ್ಣಮೂರ್ತಿಯವರನ್ನು ಸಮ್ಮಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಸಂಬಂಧ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನದ ಲೋಗೋವನ್ನು ಸಿದ್ಧಪಡಿಸಿದೆ. ಇದನ್ನು ಕರ್ನಾಟ ಕ ಸರ್ಕಾರದ ಮಾನ್ಯ ಗೃಹಸಚಿವರು ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ರವರು ಬಿಡುಗಡೆ ಮಾಡಿದರು. ಆ ಸಂದರ್ಭದಲ್ಲಿ ಮಾತನಾಡುತ್ತಾ ಎರಡು ದಿನಗಳ ಈ ಸಮ್ಮೇಳನದಲ್ಲಿ ಜಿಲ್ಲೆಗೆ ಸಂಬಂಧಿಸಿದ ಮಹತ್ವಪೂರ್ಣವಾದ ವಿಷಯಗಳನ್ನು ಚರ್ಚೆ ಮಾಡುವ ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ.
ಅಲ್ಲದೇ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡ ಗೋಷ್ಠಿಯನ್ನು ಏರ್ಪಡಿಸಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು. ಜಿಲ್ಲಾಡಳಿತ ಈ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರವನ್ನು ನೀಡಿದ್ದು ಜಿಲ್ಲೆಯ ವಿವಿಧ ಕಲೆಗಳ ಪ್ರದರ್ಶನ ಪ್ರಾತ್ಯಕ್ಷಿಕೆಯನ್ನು ಮೊದಲ ಬಾರಿಗೆ ಏರ್ಪಡಿಸಲಾಗಿದ್ದು, ಇದು ಜಿಲ್ಲೆಯ ಕಲೆಗಳ ಅನಾವರಣಕ್ಕೆ ಸಹಕಾರಿಯಾಗುತ್ತದೆ ಎಂದರು. ಎರಡು ದಿನಗಳ ಕನ್ನಡ ಸಾಹಿತ್ಯದ ಹಬ್ಬದಲ್ಲಿ ಸಾರ್ವಜನಿಕರು ಎಲ್ಲರೂ ಪಾಲ್ಗೊಂಡು ಸಮ್ಮೇಳವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಾದ ಸಿ.ಎಸ್.ಪ್ರಭು, ಮಹಾನಗರಪಾಲಿಕೆ ಆಯುಕ್ತರಾದ ಅಶ್ವೀಜ, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಚೀ.ನಿ.ಪುರುಸೋತ್ತಮ್, ಹರೀಶಾಚಾರ್ಯ ಮತ್ತು ಕ.ಸಾ.ಪ. ಅಧಿಕಾರಿಗಳು ಹಾಜರಿದ್ದರು.