ಜಿಲ್ಲೆಯಲ್ಲಿ ತೆಂಗು ಬೆಳೆ ಬೆಳೆಯುವ ರೈತರು ತಮ್ಮ ತೆಂಗಿನ ಬೆಳೆಯನ್ನು ವಿಮಾ ಯೋಜನೆಗೊಳಪಡಿಸಬೇಕೆಂದು ತೋಟಗಾರಿಕೆ ಉಪನಿರ್ದೇಶಕ ಶಾರದಮ್ಮ ಮನವಿ ಮಾಡಿದ್ದಾರೆ.
ಆರೋಗ್ಯವಂತ ತೆಂಗಿನ ಗಿಡ/ ಮರಗಳು(4 ರಿಂದ 60 ವರ್ಷದವರೆಗೆ) ಈ ವಿಮೆಗೊಳಪಡುತ್ತವೆ. ರೈತರು ಕನಿಷ್ಠ 5 ತೆಂಗಿನ ಗಿಡ/ ಮರಗಳನ್ನು ಕಡ್ಡಾಯವಾಗಿ ವಿಮೆಗೊಳಪಡಿಸಬೇಕಾಗಿದ್ದು, 5ಕ್ಕಿಂತ ಕಡಿಮೆ ಸಂಖ್ಯೆಯ ತೆಂಗಿನ ಮರ/ ಗಿಡಗಳು ಈ ವಿಮೆಗೆ ಒಳಪಡುವುದಿಲ್ಲ.
ಹವಾಮಾನ ವೈಪರೀತ್ಯದಿಂದ/ ಕೀಟ ಮತ್ತು ರೋಗ/ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದಲ್ಲಿ, ಬರಗಾಲ/ ಆಲಿಕಲ್ಲು/ ಸಿಡಿಲುಬಡಿತದಿಂದ ತೆಂಗಿನ ಗಿಡ /ಮರಗಳಿಗೆ ಸಂಪೂರ್ಣ ಹಾನಿಯಾಗಿ ಸತ್ತು ಹೋದಲ್ಲಿ ಹಾನಿ ಸಂಭವಿಸಿದ 15 ದಿನಗಳೊಳಗಾಗಿ ರೈತರು ಕಡ್ಡಾಯವಾಗಿ ವಿಮಾ ಕಂಪನಿಗೆ ತಿಳಿಸತಕ್ಕದ್ದು.
ಈ ವಿಮಾ ಯೋಜನೆಯನ್ನು ತೆಂಗು ಅಭಿವೃದ್ಧಿ ಮಂಡಳಿಯು ಅನುಷ್ಠಾನಗೊಳಿಸುತ್ತಿದ್ದು, ಆಸಕ್ತ ರೈತರು ತೆಂಗು ಅಭಿವೃದ್ಧಿ ಮಂಡಳಿಯ ನಿಗಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಆಧಾರ್ ಕಾರ್ಡ್, ಬ್ಯಾಂಕ್ ಪುಸ್ತಕ ಪ್ರತಿ, ವಂತಿಕೆ ಹಣದೊಂದಿಗೆ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದಾಗಿದೆ. ವಂತಿಕೆ ಹಣ ಪಾವತಿಗೆ ಸಂಬಂಧಿಸಿದ ಸ್ವೀಕೃತಿಯನ್ನು ಪಡೆಯಬೇಕು.
ವಿಮಾ ಮೊತ್ತವನ್ನು ಪ್ರತಿ ಮರ/ಗಿಡ(4 ರಿಂದ 15 ವರ್ಷ)ಕ್ಕೆ 900 ರೂ.ನಂತೆ ಹಾಗೂ ಪ್ರತಿ ಮರ/ಗಿಡ(16 ರಿಂದ 60 ವರ್ಷ)ಕ್ಕೆ 1750 ರೂ.ಗಳಿಗೆ ನಿಗಧಿಪಡಿಸಲಾಗಿದ್ದು, ವಿಮಾ ಮೊತ್ತದ ಶೇ.25ರಷ್ಟು ವಿಮಾ ಕಂತಿನ ದರವನ್ನು ರೈತರು ಪಾವತಿಸಬೇಕು ಎಂದು ಅವರು ತಿಳಿಸಿದ್ದಾರೆ.