“ನಮ್ಮ ಹಳ್ಳಿಗಾಡಿನ ಮಕ್ಕಳಲ್ಲಿ ಧೈರ್ಯ ಮತ್ತು ಕಲಿಕೆಯ ಗಟ್ಟಿತನ ಹೆಚ್ಚಾಗಿಯೇ ಇರುತ್ತದೆ. ಆದರೆ, ಇಂಗ್ಲಿಷ್ ಭಾಷಾ ಸಂವಹನದಲ್ಲಿ ಎದುರಿಸುವ ತೊಡಕುಗಳು ಅವರಲ್ಲಿ ತುಸು ಹಿಂಜರಿಕೆ ತರುತ್ತದೆ. ಇದೇ ಕಾರಣಕ್ಕೆ ನಮ್ಮ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಭಾಷಾ ಸಂವಹನದ ವಾತಾವರಣ ಬೆಳೆಸಲು ಹೆಚ್ಚಿನ ಒತ್ತು ಕೊಡಬೇಕಿದೆ. ಇದು ಸಾಧ್ಯವಾದಾಗ ಖಾಸಗಿ ಶಾಲೆಗಳ ಮಕ್ಕಳೊಂದಿಗೆ ನಮ್ಮ ಸರ್ಕಾರಿ ಶಾಲೆಗಳ ಮಕ್ಕಳು ಜಾಗತಿಕ ಸ್ಪರ್ಧೆಯಲ್ಲಿ ಮುಂದಿರುತ್ತಾರೆ” ಎಂದು ತುಮಕೂರು ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿಗಳಾದ (ಆಡಳಿತ) ಹಾಲಸಿದ್ದಪ್ಪ ಪೂಜೇರಿ ಅವರು ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿ ಆವರಣದ ಸಭಾಂಗಣದಲ್ಲಿ ʼಇ-ಸಂಭಾಷಣೆ – ಇಂಗ್ಗೀಷ್ ಸ್ಪೀಕಿಂಗ್ ಕೋರ್ಸ್ʼ ನ ಸುಗಮಕಾರರಿಗೆ ದಿ.13-12-2024, ಶುಕ್ರವಾರದಂದು ನಡೆದ ಒಂದು ದಿನದ ದಿಕ್ಸೂಚಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳ ಶಿಕ್ಷಕರ ಇಂಗ್ಲೀಷ್ ಸಂವಹನ ಸಾಮರ್ಥ್ಯವನ್ನುಉತ್ತಮಗೊಳಿಸಿ ಆ ಮೂಲಕ ಶಾಲೆಗಳಲ್ಲಿ ಇಂಗ್ಲೀಷ್ ಸಂವಹನದ ಪರಿಸರ ನಿರ್ಮಿಸುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮವನ್ನು ಡಯಟ್ ತುಮಕೂರು ಮತ್ತು ಮಧುಗಿರಿ ಆಯೋಜಿಸಿತ್ತು.
ತುಮಕೂರು ಮತ್ತು ಮಧುಗಿರಿ ಡಯಟ್ ನ ಜತೆಗೆ ಬೆಂಗಳೂರಿನಲ್ಲಿರುವ ಪ್ರಾದೇಶಿಕ ಇಂಗ್ಲೀಷ್ ಭಾಷಾ ಸಂಸ್ಥೆ – ದಕ್ಷಿಣ ಭಾರತ ಹಾಗೂ ಕೇರಿಂಗ್ ವಿತ್ ಕಲರ್ – ಎ ಮಾನಸಿ ಕಿರ್ಲೋಸ್ಕರ್ ಇನಿಷಿಯೆಟಿವ್ ಎಂಬ ಸರ್ಕಾರೇತರ ಸಂಸ್ಥೆಗಳು ಜತೆಗೂಡಿ ʼಇ-ಸಂಭಾಷಣೆ – ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ʼ ಎಂಬ ಈ ವಿನೂತನ ತರಬೇತಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿವೆ. ಈಗಾಗಲೇ ಎರಡೂ ಶೈಕ್ಷಣಿಕ ಜಿಲ್ಲೆಗಳ ನೂರಕ್ಕೂ ಹೆಚ್ಚು ಶಿಕ್ಷಕ ಸುಗಮಕಾರರಿಗೆ ಐದು ದಿನಗಳ ಕಾಲ ತರಬೇತಿ ನೀಡಲಾಗಿದೆ. ಮೊದಲ ಹಂತದಲ್ಲಿ ಈ ಸುಗಮಕಾರರಿಂದ ಸುಮಾರು ೧೦೦೦ ಶಿಕ್ಷಕರಲ್ಲಿ ಇಂಗ್ಲೀಷ್ ಸಂಭಾಷಣಾ ಸಾಮರ್ಥ್ಯ ವೃದ್ಧಿಸುವ ಗುರಿ ಹೊಂದಲಾಗಿದೆ.
ಈ ಸುಗಮಕಾರರು ಅನುಸರಿಸಬೇಕಾದ ಕ್ರಮಗಳು, ಕೋರ್ಸ್ ನ ಅಂಶಗಳು, ಕಾರ್ಯ ಚಟುವಟಿಕೆಗಳು, ಮೌಲ್ಯಮಾಪನ ಹಾಗೂ ಇನ್ನಿತರ ಅನುಪಾಲನಾ ಮತ್ತು ಬೆಂಬಲ ವ್ಯವಸ್ಥೆಯ ಬಗ್ಗೆ ಕಾರ್ಯಾಗಾರದಲ್ಲಿ ವಿವರವಾಗಿ ತಿಳಿಸಲಾಯಿತು.
ಹಾಲಸಿದ್ದಪ್ಪಪೂಜೇರಿ, ಉಪಕಾರ್ಯದರ್ಶಿ (ಆಡಳಿತ), ಸಂಜೀವಪ್ಪ, ಉಪಕಾರ್ಯದರ್ಶಿ (ಅಭಿವೃದ್ಧಿ), ಜಿ.ಪ., ತುಮಕೂರು, ಮಂಜುನಾಥ್, ಉಪನಿರ್ದೇಶಕರು (ಅಭಿವೃದ್ಧಿ), ಪ್ರಾಂಶುಪಾಲರು, ಡಯಟ್ ತುಮಕೂರು, ಗಿರಿಜ, ಉಪನಿರ್ದೇಶಕರು (ಆಡಳಿತ), ಮಧುಗಿರಿ, ಗಂಗಾಧರ್ ಹೆಚ್ ಆರ್, ಪ್ರಾಂಶುಪಾಲರು, ಡಯಟ್ ಮಧುಗಿರಿ, ಡಾ. ಪೂಜಾಗಿರಿ, ಪ್ರಾಧ್ಯಾಪಕರು, ಪ್ರಾದೇಶಿಕ ಆಂಗ್ಲ ಭಾಷಾ ಸಂಸ್ಥೆ – ದಕ್ಷಿಣಭಾರತ, ಬೆಂಗಳೂರು, ರಾಜೀವ್ ಅನ್ನಲೂರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಕೇರಿಂಗ್ ವಿತ್ ಕಲರ್, ಎರಡೂ ಜಿಲ್ಲೆಯ ಉಪನಿರ್ದೇಶಕರ ಕಛೇರಿಯ ಅಧಿಕಾರಿಗಳು, ಎರಡೂ ಡಯಟ್ ಗಳ ಹಿರಿಯ ಉಪನ್ಯಾಸಕರು,ಹತ್ತೂಬ್ಲಾಕ್ ನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಶೈಕ್ಷಣಿಕ ಇಲಾಖೆಯ ಅಧಿಕಾರಿಗಳು, ಹಾಗೂ ಇ-ಸಂಭಾಷಣಾ ಕೋರ್ಸ್ ನ ಶಿಕ್ಷಕ ಸುಗಮಕಾರರು, ಕೇರಿಂಗ್ ವಿತ್ ಕಲರ್ ನ ಸಿಬ್ಬಂದಿ ಮತ್ತು ಡಿ.ಇ.ಟಿ.ಪಿ. ತಂಡದ ಸದಸ್ಯರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು