ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ರಾಜ್ಯ ಕಾರ್ಯಕಾರಿಣಿ ಸಭೆ
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ಜಿಲ್ಲಾ ಘಟಕದ ವತಿಯಿಂದ ಇಂದು (ನ.23) ಬೆಳಿಗ್ಗೆ 10 ಗಂಟೆಗೆ ನಗರದ ಹೊರಪೇಟೆ ಮುಖ್ಯರಸ್ತೆಯಲ್ಲಿರುವ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯಲಿರುವ ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ರಾಜ್ಯ ಕಾರ್ಯಕಾರಿಣಿ ಸಭೆಯ ಸಿದ್ಧತೆಯನ್ನು ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಜಿ.ಕರುಣಾಕರ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಪರಿಶೀಲಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಮಾನ್ಯತೆ ಪಡೆದಿರುವಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳು, ಮತ್ತು ಸೌಲಭ್ಯಗಳ ಮಾಹಿತಿಯನ್ನು ಆಯಾ ಜಿಲ್ಲೆಗಳ ಜನರಿಗೆ ತಲುಪಿಸುವಲ್ಲಿ ಪ್ರತಿನಿತ್ಯ ಶ್ರಮಿಸುತ್ತಿದ್ದಾರೆ.
ಪತ್ರಿಕೆಗಳು ಸಮಾಜದ ವಿವಿಧ ರಂಗಗಳಲ್ಲಿನ ವಿದ್ಯಮಾನಗಳನ್ನು ತಿಳಿಸುವಲ್ಲಿ ಮತ್ತು ಜನಜಾಗೃತಿ ಮೂಡಿಸುವಲ್ಲಿ ಅತ್ಯಂತ ಪ್ರಬಲ ಮತ್ತು ಪ್ರಭಾವಿಯುತ ಸಾಧನಗಳು. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನಿಸಿಕೊಂಡಿರುವ ಪತ್ರಿಕೋದ್ಯಮದಲ್ಲಿ ಸಂಪಾದಕರು ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪ್ರತಿನಿತ್ಯ ದಿನಪತ್ರಿಕೆಗಳನ್ನು ಹೊರತರಲು ಕಷ್ಟ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಾಹೀರಾತು ಅಭಾವ: ದಿನಪತ್ರಿಕೆಗಳ ಮುಖ್ಯ ಆದಾಯದ ಮೂಲ ಒಂದು ಓದುಗರಾದರೇ, ಮತ್ತೊಂದು ಜಾಹೀರಾತು.
ಕೋವಿಡ್ ನಂತರದ ದಿನಗಳಲ್ಲಿ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳಿಗೆ ಜಾಹೀರಾತುಗಳ ಪ್ರಮಾಣ ತೀರಾ ಕಡಿಮೆಯಾಗಿದ್ದು, ಇಂತಹ ಸಂದರ್ಭದಲ್ಲಿ ಪತ್ರಿಕೆಗಳು ಆರ್ಥಿಕವಾಗಿ ದುರ್ಬಲಗೊಂಡಿವೆ. ಸಣ್ಣ ಪತ್ರಿಕೆಗಳು ಮುದ್ರಣ ಕಾಗದ ಖರೀದಿ ಸಮಸ್ಯೆ, ಪತ್ರಿಕೆಗಳ ಮುದ್ರಣ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕೋವಿಡ್ ನಂತರದ ದಿನಗಳಲ್ಲಿ ಮುದ್ರಣ ವೆಚ್ಚ ದುಪ್ಪಟ್ಟಾಗಿದ್ದು, ಸಣ್ಣ ಪತ್ರಿಕೆಗಳು ಮುದ್ರಣ ವೆಚ್ಚ ಭರಿಸಲಾಗದಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಣ್ಣ ಪತ್ರಿಕೆಗಳು ಸಾಮಾನ್ಯವಾಗಿ ಸ್ಥಳೀಯ ಭಾಷೆಯಲ್ಲಿ ಪ್ರಕಟವಾಗುತ್ತವೆ. ಈ ಪತ್ರಿಕೆಗಳು ಸ್ಥಳೀಯ ಸಮಸ್ಯೆಗಳನ್ನು ಹೆಚ್ಚಾಗಿ ಚರ್ಚಿಸುವ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪರಿಣಾಮಕಾರಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಇವುಗಳನ್ನು ಸ್ಥಳೀಯ ಪತ್ರಿಕೆಗಳು ಮತ್ತು ಜಿಲ್ಲಾ ಪತ್ರಿಕೆಗಳು ಎಂದು ಕರೆಯಲಾಗುತ್ತದೆ. ಸಣ್ಣ ಪತ್ರಿಕೆಗಳು ಸಾಮಾನ್ಯವಾಗಿ ಏಕವ್ಯಕ್ತಿ ಮಾಲೀಕತ್ವದಲ್ಲಿರುತ್ತವೆ. ಸಣ್ಣ ಪತ್ರಿಕೆಗಳ ಪ್ರಸಾರವು ಸ್ಥಳೀಯ ಅಥವಾ ಪ್ರಾದೇಶಿಕವಾಗಿರುತ್ತದೆ. ಕೆಲವೊಂದು ಸಣ್ಣ ಪತ್ರಿಕೆಗಳು ಅನಿವಾರ್ಯ ಕಾರಣದಿಂದ ನಗರ ಇಲ್ಲವೇ ಪಟ್ಟಣಗಳಲ್ಲಿ ಪ್ರಕಟಗೊಂಡರೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರಸಾರವಾಗುತ್ತವೆ. ರಾಷ್ಟ್ರೀಯ ಪತ್ರಿಕೆಗಳಿಗಿಂತ ಇವು ಹೆಚ್ಚು ಪರಿಣಾಮಕಾರಿಯಾಗಿ ಗ್ರಾಮೀಣ ಜನರನ್ನು ತಲುಪುತ್ತವೆ.
ಪ್ರಜಾಪ್ರಭುತ್ವದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಪತ್ರಿಕೆಗಳ ಪಾತ್ರ ಬಹಳ ಮುಖ್ಯವಾದುದು. ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ರಾಜ್ಯ ಮತ್ತು ಪ್ರಾದೇಶಿಕ ಸಂಗತಿ, ಸಮಸ್ಯೆಗಳ ಮೇಲೆ ಹೆಚ್ಚು ಬೆಳಕು ಚೆಲ್ಲಬಲ್ಲವು. ಜನತೆಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಲು ವೇದಿಕೆಯನ್ನೊದಗಿಸುತ್ತವೆ. ಈ ಪತ್ರಿಕೆಗಳು ಅನೇಕ ವಿಷಯಗಳಲ್ಲಿ ಆಡಳಿತಯಂತ್ರ ಮತ್ತು ಜನತೆಯ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಸಣ್ಣ ಪತ್ರಿಕೆಗಳು ಸೀಮಿತ ಪ್ರದೇಶದಲ್ಲಿ ಕೆಲವು ದೊಡ್ಡ ಪತ್ರಿಕೆಗಳಿಗಿಂತ ಜನತೆಯೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿರುತ್ತವೆ. ಸರ್ಕಾರದ ಧೋರಣೆ ಮತ್ತು ಕಾರ್ಯಕ್ರಮಗಳನ್ನು ಜನತೆಯ ಮುಂದಿಟ್ಟು ಸಾರ್ವಜನಿಕ ಅನಿಸಿಕೆಗಳನ್ನು ಸರ್ಕಾರದ ಗಮನಕ್ಕೆ ತರುತ್ತವೆ. ಈ ದೃಷ್ಠಿಯಿಂದ ಸಣ್ಣ ಪತ್ರಿಕೆಗಳು ರಾಷ್ಟ್ರ ಮತ್ತು ರಾಜ್ಯಕ್ಕೆ ಅತಿ ಮುಖ್ಯ.
ಜಿಲ್ಲಾ ಮತ್ತು ಪ್ರಾದೇಶಿಕ ಕನ್ನಡ ದಿನಪತ್ರಿಕೆಗಳ ಅಸ್ಥಿತ್ವಕ್ಕಾಗಿ ಎ.ಸಿ.ತಿಪ್ಪೇಸ್ವಾಮಿಯವರ ನೇತೃತ್ವದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ಸ್ಥಾಪನೆಗೊಂಡು ವರ್ಷ ಕಳೆಯುವಷ್ಟರಲ್ಲಿ ಅಭೂತಪೂರ್ವ ಯಶಸ್ಸು ಕಂಡಿದ್ದು, ರಾಜ್ಯದಲ್ಲಿರುವ ಸುಮಾರು 620ಕ್ಕೂ ಹೆಚ್ಚು ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಪೈಕಿ 350ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ರಾಜ್ಯದ ಏಕೈಕ ಸಂಘ ಎನಿಸಿಕೊಂಡಿದೆ.
ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಹಿತ ಕಾಯಲು ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಕೃಷ್ಣಮೂರ್ತಿ ಕಾರ್ಯೋನ್ಮುಖರಾಗಿ ಪ್ರತಿ ಜಿಲ್ಲೆಯಲ್ಲೂ ರಾಜ್ಯ ಕಾರ್ಯಕಾರಿಣಿ ಸಭೆಗಳನ್ನು ನಡೆಸಿ ಪತ್ರಿಕೆಗಳ ಮತ್ತು ಸಂಪಾದಕರ ಸಮಸ್ಯೆಗಳನ್ನು ಅರಿತು ಸರ್ಕಾರಗಳಿಂದ ಅವರಿಗೆ ಸಿಗಬೇಕಾದ ಜಾಹಿರಾತುಗಳು ಮತ್ತು ಇತರೆ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಹೋರಾಟದ ಹೆಜ್ಜೆಗಳನ್ನಿಟ್ಟಿದ್ದಾರೆ.
ಮಾಧ್ಯಮ ಪಟ್ಟಿಗೆ ಸೇರ್ಪಡೆಗೊಂಡ ಎಸ್ಸಿ ಎಸ್ಟಿ ಪತ್ರಿಕೆಗಳಿಗೆ ಸಿಗಬೇಕಾಗಿದ್ದ ಒಂದು ಪುಟದ ಜಾಹೀರಾತನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದು, 5 ವರ್ಷದೊಳಗಿನ ಒಬಿಸಿ ಪತ್ರಿಕೆಗಳಿಗೆ ಸಿಗಬೇಕಾಗಿರುವ ಒಂದು ಪುಟದ ಜಾಹಿರಾತನ್ನು ಕೊಡಿಸುವುದು, ಶೇ.12% ಜಾಹಿರಾತು ಧರ ಹೆಚ್ಚಳ ಸೇರಿದಂತೆ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಸಂಘವು ಹಗಲಿರುಳು ಶ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯಾದ್ಯಂತ ಸಂಘಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಸಂಘದ ಸದಸ್ಯತ್ವಕ್ಕಾಗಿ ಪತ್ರಿಕಾ ಸಂಪಾದಕರು ತುದಿಗಾಲಲ್ಲಿ ನಿಂತಿದ್ದಾರೆ.
ಕಾರ್ಯಕ್ರಮದ ಸಿದ್ಧತೆಯ ಪರಿಶೀಲನೆ ವೇಳೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಭೀಮರಾಯ್ ಹದ್ದಿನಾಳ್, ರಾಜ್ಯ ಜಂಟಿ ಕಾರ್ಯದರ್ಶಿ ಅಮಾನ್ ಕೊಡಗಲಿ, ರಾಜ್ಯ ಖಜಾಂಚಿ ಎಸ್.ಟಿ. ವೇದಮೂರ್ತಿ, ಸಿ.ರಂಗನಾಥ್, ಬಿಜಾಪುರ ಜಿಲ್ಲಾಧ್ಯಕ್ಷ ಇರ್ಫಾನ್ ಶೇಖ್, ತುಮಕೂರು ಜಿಲ್ಲಾ ಉಪಾಧ್ಯಕ್ಷ ಪಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎನ್.ಮಂಜುನಾಥಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಎನ್.ಮಹೇಶ್ಕುಮಾರ್, ಖಜಾಂಚಿ ಕಂಬಣ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ತೊ.ಗ.ಅಡವೀಶಪ್ಪ, ಬಸವರಾಜು, ಹಿರಿಯರಾದ ಆರ್.ನಾಗರಾಜು, ಸಂಪಾದಕ ಮಿತ್ರರಾದ ಸಿದ್ಧರಾಜು, ಅಭಿಷೇಕ್, ಅಕ್ಷಯ್ ಚೌದ್ರಿ ಸೇರಿದಂತೆ ಹಲವರು ಭಾಗವಹಿಸಿದ್ದರು.