ತುಮಕೂರು: ವಿವಿಧ ಕಾರಣಗಳಿಂದ ಪೋಷಕರಿಂದ ಬೇರ್ಪಟ್ಟ 18 ವರ್ಷದೊಳಗಿನ ಮಕ್ಕಳಿಗೆ ಕೌಟುಂಬಿಕ ವಾತಾವರಣದಲ್ಲಿ ಬೆಳೆಯಲು ಮಕ್ಕಳ ರಕ್ಷಣಾ ಘಟಕದಿಂದ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್ ತಿಳಿಸಿದ್ದಾರೆ.
ಮಕ್ಕಳ ರಕ್ಷಣಾ ಘಟಕವು ಪೋಷಕರಿಂದ ಬೇರ್ಪಟ್ಟ ಮಗುವಿನ ವೈದ್ಯಕೀಯ, ಶೈಕ್ಷಣಿಕ ಹಾಗೂ ಅಭಿವೃದ್ಧಿಯ ಅಗತ್ಯಗಳನ್ನು ಪೂರೈಸಲಾಗುವುದು. ಮಕ್ಕಳ ಪಾಲನಾ ಸಂಸ್ಥೆಯ ವಾತಾವರಣದಿಂದ ಬೇರ್ಪಡಿಸಿ ಕುಟುಂಬದ ವಾತಾವರಣದಲ್ಲಿ ಬೆಳೆಸಲು, ಇಂತಹ ಮಕ್ಕಳು ಸಂಕಷ್ಟಕ್ಕೀಡಾಗುವುದನ್ನು ತಪ್ಪಿಸಿ ಕೌಟುಂಬಿಕ ವ್ಯವಸ್ಥೆಯಲ್ಲಿಯೇ ಬೆಳೆಯಲು ಅವಕಾಶ ಕಲ್ಪಿಸಲಿದೆ.
ಮಕ್ಕಳ ಕಾಯ್ದೆ 2015ರ ಪ್ರಕಾರ ಪೋಷಣೆ ಹಾಗೂ ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗುವುದು.
ವಸತಿರಹಿತರು, ಯಾವುದಾದರೂ ನೈಸರ್ಗಿಕ ವಿಕೋಪಗಳಿಗೆ ಒಳಗಾದ ಸಂತ್ರಸ್ತರು, ಬಾಲಕಾರ್ಮಿಕರು, ಬಾಲ್ಯವಿವಾಹಕ್ಕೆ ಒಳಗಾದ ಸಂತ್ರಸ್ತರು, ಮಾನವ ಕಳ್ಳ ಸಾಗಾಣಿಕೆಗೆ ಒಳಗಾದ ಸಂತ್ರಸ್ತರು, ಹೆಚ್ಐವಿ/ಮಾರಣಾಂತಿಕ ಕಾಯಿಲೆಗೆ ಒಳಗಾದ ಮಕ್ಕಳು, ವಿಶೇಷ ಚೇತನ ಮಕ್ಕಳು, ತಪ್ಪಿಕೊಂಡಿರುವ ಅಥವಾ ಓಡಿ ಬಂದಿರುವ ಮಗು, ಬಾಲ ಭಿಕ್ಷುಕರು ಅಥವಾ ಬೀದಿಯಲ್ಲಿ ವಾಸಿಸುತ್ತಿರುವ, ಹಿಂಸೆಗೆ ಒಳಪಟ್ಟ ಅಥವಾ ನಿಂದನೆ ಅಥವಾ ಶೋಷಿತ ಮಕ್ಕಳಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.
ಮಗುವಿನ ತಾಯಿ ವಿಧವೆ ಅಥವಾ ವಿಚ್ಛೇದಿತೆ ಅಥವಾ ಕುಟುಂಬದಿಂದ ಪರಿತ್ಯಜಿಸಲ್ಪಟ್ಟಿದ್ದರೆ ಅಂತಹ ಅರ್ಹ ಮಕ್ಕಳು, ಲೈಂಗಿಕವಾಗಿ ದುರ್ಬಳಕೆಯಾದ ಅರ್ಹ ಸಂತ್ರಸ್ತ ಮಕ್ಕಳು, ವಿಸ್ತøತ ಕುಟುಂಬದಲ್ಲಿರುವ ಅನಾಥ ಅರ್ಹ ಮಕ್ಕಳು, ಪಿ.ಎಂ ಕೇರ್ ಫಾರ್ ಚಿಲ್ಡ್ರನ್ ಯೋಜನೆಯಡಿ ಬರುವಂತಹ ಅರ್ಹ ಮಕ್ಕಳು, ಜೈಲು ನಿವಾಸಿ ಪೋಷಕರ ಅರ್ಹ ಮಕ್ಕಳು, ಪಾಲನೆ ಮತ್ತು ರಕ್ಷಣೆ ಅಗತ್ಯವುಳ್ಳ ಮಗುವಿನ ಬಗ್ಗೆ ಮಾಹಿತಿ ಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮೊದಲನೇ ಮಹಡಿ, ಮಹಾತ್ಮ ಗಾಂಧಿ ಕ್ರೀಡಾಂಗಣ, ಕುವೆಂಪು ನಗರ, ತುಮಕೂರು ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.