ಬೆಳ್ಳಾವಿ ನರಹರಿ ಶಾಸ್ತ್ರಿಗಳು ರಂಗಭೂಮಿ ಸಾಹಿತ್ಯ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕಲಾವಿದ ನಾಗಭೂಷಣ್ ಹೇಳಿದರು.
ನಗರದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸಂಗೀತ ಪ್ರಿಯ ಜಿಲ್ಲಾ ರಂಗಭೂಮಿ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಕನ್ನಡ ನಾಡ ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡು-ನುಡಿಗಾಗಿ ನರಹರಿ ಶಾಸ್ತ್ರಿಗಳು ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡಿದ್ದಾರೆ. ಜತೆಗೆ ಅನೇಕ ನಾಟಕಗಳ ರಚನೆ ಮಾಡಿ ಕರ್ನಾಟಕ ಷೇಕ್ಸ್ ಫಿಯರ್, ಡಾ. ಗುಬ್ಬಿ ವೀರಣ್ಣನವರಂತ ಕಂಪೆನಿಯಲ್ಲಿ ಅವರ ಹಲವು ನಾಟಕಗಳು ಆ ಕಾಲದಲ್ಲಿ ಪ್ರಬುದ್ಧವಾಗಿ ಪ್ರದರ್ಶನಗೊಂಡಿವೆ ಎಂದರು.
ಸ್ವತಃ ಸಾಹಿತ್ಯ ಸಂಗೀತ ಬಲ್ಲವರಾಗಿದ್ದ ಶಾಸ್ತ್ರೀಯವರು ಕಥಾ ಕೀರ್ತನಕಾರರಾಗಿ ಇತಿಹಾಸದಲ್ಲಿ ಆದಿ ಕವಿ ಎನಿಸಿದ್ದಾರೆ. ಈ ಮಹನೀಯರು ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಸಮೀಪದ ಬೆಳ್ಳಾವಿಯವರು ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಇಂತಹ ಶ್ರೇಷ್ಠ ವಿದ್ವಾಂಸರ ಸಾಂಸ್ಕೃತಿಕ ಭವನ ಅಥವಾ ಕಲಾ ಕ್ಷೇತ್ರ ನಮ್ಮ ಜಿಲ್ಲೆಯಲ್ಲಿ ಆಗದಿರುವುದು ಆ ಸಾಹಿತಿಗಳಿಗೆ ತೋರಿದ ಅಗೌರವವಾಗಿದೆ ಎಂದರು.
ಕರ್ನಾಟಕದಲ್ಲಿ ತುಮಕೂರು ಜಿಲ್ಲೆ ರಂಗಭೂಮಿಯಲ್ಲಿ ಪ್ರಸಿದ್ಧಿಯಾಗಿದೆ. ಇಂಥವರ ಸ್ಮರಣೆ ಅನುಕರಣೆ ಮಾಡಬೇಕು. ಮುಂದಿನ ದಿನಗಳಲ್ಲಿ ವಸಂತ ನರಸಾಪುರದಲ್ಲಿ ಅವರ ಹೆಸರಿನ ಒಂದು ವೃತ್ತವನ್ನು ವಸಂತ ನರಸಾಪುರ ಹಿತರಕ್ಷಣಾ ವೇದಿಕೆ ಹಾಗೂ ಹಲವು ಸಂಸ್ಥೆಗಳ ನೆರವಿನೊಂದಿಗೆ ನಿರ್ಮಿಸಲಾಗುವುದು ಎಂದು ತಿಳಿಸಿದರು. ನಾಡಹಬ್ಬ ಕಾರ್ಯಕ್ರಮದಲ್ಲಿ ಗಾಯಕ ದಿಬ್ಬೂರು ಮಂಜು ಅವರಿಂದ ಗೀತ ಗಾಯನ, ಹನುಮಂತಪುರ ಭೀಮರಾಜುರವರಿಂದ ರಂಗ ಸಂಗೀತ ಕನ್ನಡ ಗೀತೆಗಳ ವಾದ್ಯ ಸಂಗೀತ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ವಸಂತ ನರಸಾಪುರ ಹಿತರಕ್ಷಣಾ ವೇದಿಕೆಯ ಕಾಂತರಾಜು, ನಾಗರಾಜು, ಕಾರ್ತಿಕ್, ಜಗದೀಶ್, ಹರೀಶ್, ವಿನಯ್, ಸಂಗೀತ ವಿದ್ವಾಂಸರುಗಳಾದ ಪ್ರವೀಣ್, ಪವನ್, ಹಿರಿಸಾವೆ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.