ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಮಾತದಾನ ಅತ್ಯಂತ ಪ್ರಮುಖವಾಗಿದ್ದು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಲು ಯುವಜನತೆಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ಆರ್. ಅಧಿಕಾರಿಗಳಿಗೆ ಸೂಚಿಸಿದರು.
ನಗರದ ನಿರೀಕ್ಷಣಾ ಮಂದಿರ ಸಭಾಂಗಣದಲ್ಲಿಂದು ಸಭೆ ನಡೆಸಿ ಮಾತನಾಡಿದ ಅವರು, ವಿವಿಧ ಶಿಕ್ಷಣ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವಕರು ಚುನಾವಣೆ ಸಂದರ್ಭಗಳಲ್ಲಿ ತಮ್ಮ ಕ್ಷೇತ್ರಗಳಿಗೆ ತೆರಳಿ ಮತದಾನ ಮಾಡಲು ಆಸಕ್ತಿ ತೋರದೆ ಇರುವುದರಿಂದ ಅವರು ಇರುವ ಸ್ಥಳಗಳಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆಯಡಿ ಸ್ವೀಕೃತವಾದ ಅರ್ಜಿಗಳು, ಮನೆ-ಮನೆ ಸಮೀಕ್ಷೆಯ ಪ್ರಗತಿ ಹಾಗೂ ಇ.ಪಿ.ರೇಷಿಯೋ, ಜೆಂಡರ್ ರೇಷಿಯೋ ಮುಂತಾದ ಮತದಾರರ ಪಟ್ಟಿಯ ಸಂಬಂಧ ಸಾಧಿಸಿರುವ ಪ್ರಗತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರನ್ನು ನೋಂದಣಿ ಮಾಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಇ.ಪಿ. ರೇಷಿಯೋ ಮತ್ತು ಜೆಂಡರ್ ರೇಷಿಯೋ ಹೆಚ್ಚಾಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು ಎಂದರು.
ಪಟ್ಟಿಯಲ್ಲಿ ಮರಣ ಹೊಂದಿರುವ ಮತ್ತು ಖಾಯಂ ಸ್ಥಳಾಂತರಗೊಂಡಿರುವ ಮತದಾರರನ್ನು ಗುರುತಿಸಿ, ನಿಯಮಾನುಸಾರ ಮತದಾರರ ಪಟ್ಟಿಯಿಂದ ಕೈಬಿಡಲು ಸೂಕ್ತ ಕ್ರಮವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಮಹಾನಗರ ಪಾಲಿಕೆ ಆಯುಕ್ತರಾದ ಅಶ್ವಿಜ ಬಿ.ವಿ., ಅಪರ ಜಿಲ್ಲಾಧಿಕಾರಿ ಡಾ: ಎನ್.ತಿಪ್ಪೇಸ್ವಾಮಿ, ಚುನಾವಣಾ ತಹಶೀಲ್ದಾರ್ ರೇμÁ್ಮ, ಉಪ ವಿಭಾಗಾಧಿಕಾರಿಗಳಾದ ಸಪ್ತಶ್ರೀ, ಗೌರವ್ ಕುಮಾರ್ ಶೆಟ್ಟಿ ಸೇರಿದಂತೆ ವಿವಿಧ ತಾಲ್ಲೂಕುಗಳ ತಹಸೀಲ್ದಾರ್ಗಳು, ಮತ್ತಿತರರು ಉಪಸ್ಥಿತರಿದ್ದರು.
ಸಭೆಗೂ ಮುನ್ನ ನಗರದ ಕೋತಿತೋಪು, ಅಂತರಸನಹಳ್ಳಿ, ಕೊರಟಗೆರೆ ತಾಲೂಕಿನ ದುದ್ದನ ಹಳ್ಳಿ, ಬ್ಯಾಲ್ಯ ಸೇರಿದಂತೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದ ಆಯ್ದ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.