ಹೆಚ್ಐವಿ ಸೋಂಕಿನ ಬಗ್ಗೆ ಯುವ ಜನರಲ್ಲಿ ಜಾಗೃತಿ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ತಿಳಿಸಿದರು.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 8197 ಹೆಚ್.ಐ.ವಿ ಸೋಂಕಿತರಿದ್ದು, ನಿಮ್ಮೊಂದಿಗೆ ಸದಾ ನಾವಿದ್ದೇವೆ ಎಂದು ಸೋಂಕಿತರಿಗೆ ಧೈರ್ಯ ತುಂಬಬೇಕು. ಹೆಚ್ಐವಿ ಸೋಂಕಿತ ವ್ಯಕ್ತಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಸೋಂಕಿತರನ್ನು ಅಸ್ಪøಶ್ಯರಂತೆ ಕಾಣಬಾರದು ಎಂದು ತಿಳಿಸಿದರು.
ಸೋಂಕಿತ ವ್ಯಕ್ತಿಯನ್ನು ಮುಟ್ಟುವುದರಿಂದಾಗಲಿ/ಮಾತನಾಡಿಸುವುದರಿಂದಾಗಲಿ ಹೆಚ್ಐವಿ ಸೋಂಕು ಹರಡುವುದಿಲ್ಲ. ದೈಹಿಕ ಸಂಪರ್ಕ ಹೊಂದುವುದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರಲ್ಲದೆ, ಹೆಎಚ್ಐವಿ ಪಾಸಿಟಿವ್ ಇರುವ ರೋಗಿಗಳನ್ನು ಪ್ರೀತಿಯಿಂದ ಮಾತನಾಡಿಸಿ ಅವರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವಂತೆ ನಾವೆಲ್ಲರೂ ಪಣತೊಡಬೇಕು. ಈ ಬಗ್ಗೆ ಜನರಲ್ಲಿ ಹೆಚ್ಚೆಚ್ಚು ಜಾಗೃತಿ ಅಗತ್ಯ ಎಂದು ತಿಳಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ: ಆರ್.ವಿ. ಮೋಹನ್ ದಾಸ್ ಮಾತನಾಡಿ, ಜಿಲ್ಲೆಯಲ್ಲಿರುವ ಏಡ್ಸ್ ಸೋಂಕಿತರ ಸಂಖ್ಯೆಯನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಏಡ್ಸ್ ಸೋಂಕಿತರ ಪ್ರಮಾಣ ಕಡಿಮೆ ಯಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಅಸ್ಗರ್ ಬೇಗ್ ಮಾತನಾಡಿ, ಏಡ್ಸ್(AIDS-Acquired immunodeficiency syndrome) ರೋಗಕ್ಕೆ ಚಿಕಿತ್ಸೆ ಇಲ್ಲದೆ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿತ್ತು. ಇತ್ತೀಚಿನ ದಿನಗಳಲ್ಲಿ ಸೋಂಕಿತ ವ್ಯಕ್ತಿ ಸಂಪೂರ್ಣ ಗುಣಮುಖವಾಗದಿದ್ದರೂ ಅವರಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಚಿಕಿತ್ಸೆ ನೀಡಿ ಸಮಾಜದಲ್ಲಿ ಒಳ್ಳೆಯ ಜೀವನ ನಡೆಸುವಂತೆ ಮಾಡಲು ಸಾಧ್ಯವಿದೆ. ಅಸುರಕ್ಷಿತ ಲೈಂಗಿಕ ಕ್ರಿಯೆ, ಸೋಂಕಿರುವ ವ್ಯಕ್ತಿಯ ರಕ್ತ ಪಡೆಯುವುದು, ಸಂಸ್ಕರಿಸದಿರುವ ಸೂಜಿ ಬಳಸುವುದರಿಂದ ಹೆಚ್ಐವಿ ಸೋಂಕು ಹರಡುತ್ತದೆ ಎಂದರಲ್ಲದೆ, ಏಡ್ಸ್ ರೋಗವನ್ನು ನಿಯಂತ್ರಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಏಡ್ಸ್ ನಿಯಂತ್ರಣದ ಬಗ್ಗೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಾಥಾ ಕಾರ್ಯಕ್ರಮವು ಜಿಲ್ಲಾ ಆಸ್ಪತ್ರೆ ಆವರಣದಿಂದ ಟೌನ್ ಹಾಲ್, ಅಶೋಕ ರಸ್ತೆ ಮಾರ್ಗವಾಗಿ ಚರ್ಚ್ ಸರ್ಕಲ್, ಕೋಟೆ ಆಂಜನೇಯ ಸ್ವಾಮಿ ಸರ್ಕಲ್ ಮೂಲಕ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಕಚೇರಿವರೆಗೆ ಸಂಚರಿಸಿ ಕರಪತ್ರ ಹಂಚುವ ಮೂಲಕ ಸಾರ್ವಜನಿಕರಲ್ಲಿ ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲಾಯಿತು.
ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಶೇಖರ್ ಮತ್ತಿತರರಿದ್ದರು.