
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರವು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಡಿಸೆಂಬರ್ 7 ರಿಂದ 2025ರ ಮಾರ್ಚ್ 17ರವರೆಗೆ ಹಮ್ಮಿಕೊಂಡಿರುವ 100 days TB Campaign on TB Elimination ಅಭಿಯಾನಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಇಂದು ಪೋಸ್ಟರ್ ಬಿಡುಗಡೆ ಹಾಗೂ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ ವಿತರಣೆ ಮಾಡುವುದರ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಶೇಖರ್ ಬಿ.ಎಂ. ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಅಭಿಯಾನದಲ್ಲಿ ಕ್ಷಯರೋಗ ನಿರ್ಮೂಲನೆ ಕುರಿತು ಎಲ್ಲಾ ಹಂತದ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲಾಗುವುದು. ಮಧುಮೇಹಿಗಳು, 60 ವರ್ಷ ಮೇಲ್ಪಟ್ಟವರು, ಪಿ.ಎಲ್.ಹೆಚ್.ಐ.ವಿ, ಸಿ.ಎಲ್.ಹೆಚ್.ಐ.ವಿ, ಗರ್ಭಿಣಿಯರು, ಧೂಮಪಾನಿಗಳನ್ನು ಪರೀಕ್ಷಿಸಿ ಸಕ್ರಿಯ ಕ್ಷಯ ರೋಗ ಪ್ರಕರಣಗಳನ್ನು ಪತ್ತೆ ಹಚ್ಚಲಾಗುವುದು. ರೋಗ ಕಂಡು ಬಂದವರಿಗೆ ಆರಂಭಿಕ ರೋಗ ನಿರ್ಣಯ ಮಾಡಿ ತ್ವರಿತ ಚಿಕಿತ್ಸೆ ಪ್ರಾರಂಭಿಸಲಾಗುವುದು ಹಾಗೂ ಪೌಷ್ಠಿಕ ಆಹಾರದ ಆರೈಕೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ|| ಮೋಹನ್ದಾಸ್ ಆರ್.ವಿ. ಮಾತನಾಡಿ, ಅಭಿಯಾನದಲ್ಲಿ ಸಂಭಾವ್ಯ ಕ್ಷಯರೋಗಿಗಳನ್ನು ಪತ್ತೆ ಹಚ್ಚಿ, ಪರೀಕ್ಷಿಸಿ, ದೃಢಪಟ್ಟ ಎಲ್ಲಾ ಕ್ಷಯ ರೋಗಿಗಳಿಗೆ ತ್ವರಿತವಾಗಿ ಚಿಕಿತ್ಸೆಯನ್ನು ನೀಡಿ ಮರಣದ ಪ್ರಮಾಣವನ್ನು ಕಡಿಮೆಗೊಳಿಸುವ ಮೂಲಕ ತುಮಕೂರು ಜಿಲ್ಲೆಯನ್ನು 2025ರ ವೇಳೆಗೆ ಕ್ಷಯ ಮುಕ್ತ ಜಿಲ್ಲೆಯನ್ನಾಗಿಸುವ ಗುರಿ ಹೊಂದಲಾಗಿದೆ. ಅಲ್ಲದೆ ಎಲ್ಲಾ ಇಲಾಖೆಗಳ ಸರ್ಕಾರಿ ನೌಕರರಿಗೆ ಕ್ಷಯರೋಗದ ಬಗ್ಗೆ ಅರಿವು ಮೂಡಿಸಿ ತಪಾಸಣೆಗೊಳಪಡಿಸಲಾಗುವುದು ಎಂದು ತಿಳಿಸಿದರು.