ಪರಿಶುದ್ಧ ರಾಜಕಾರಣ ನಡೆಸಿದ ಎಸ್.ಎಂ.ಕೃಷ್ಣ ತಮ್ಮ ಘನತೆ, ಗಾಂಭೀರ್ಯ, ತೂಕದ ಮಾತುಗಳಿಂದ ಎಲ್ಲ ಸಮುದಾಯಗಳ ಮನಸ್ಸನ್ನು ಗೆದ್ದಿದ್ದವರು ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರೂ ಬಡವರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದ ಇವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದು ಕರ್ನಾಟಕದಲ್ಲಿ ಪಾಂಚಜನ್ಯ ಮೊಳಗಿಸಿದ ಮೂಲಕ ಆ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಪಟ್ಟವನ್ನಲಂಕರಿಸಿದ ಧಿಮಂತನಾಯಕ ಎಸ್.ಎಂ.ಕೃಷ್ಣರಾಗಿದ್ದಾರೆ ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ನುಡಿದರು.
ಅವರು ಜಿಲ್ಲಾ ಕ.ಸಾ.ಪ. ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಎಸ್.ಎಂ.ಕೃಷ್ಣರವರ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನುಡಿನಮನ ಸಲ್ಲಿಸಿದರು.
ರಾಜಕಾರಣದಲ್ಲಿ ಯುವಕರ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದ ಇವರು ತಾವು ಮುಖ್ಯಮಂತ್ರಿಯಾಗಿದ್ದಾಗ ಅಪಾರ ಸವಾಲುಗಳನ್ನು ಎದುರಿಸಬೇಕಾಯಿತು. ಈ ಎಲ್ಲ ಸವಾಲುಗಳನ್ನು ಜಾಣ್ಮೆಯಿಂದ ಬಗೆಹರಿಸಿ ಸರ್ಕಾರವನ್ನು ಮುನ್ನಡೆಸಿದ ಮುತ್ಸದ್ಧಿ ರಾಜಕಾರಣಿಯಾಗಿದ್ದಾರೆ. ದೂರದ ಅಮೆರಿಕಾದಲ್ಲಿ ವಿದ್ಯಾಭ್ಯಾಸವಾಗಿದ್ದರೂ ತಮ್ಮ ಶಿಸ್ತಿನ ದಿನಚರಿಯಿಂದ ಅವರು ಎಲ್ಲರ ಗಮನ ಸೆಳೆಯುತ್ತಾರೆ. ಇವರ ಮರಣ ರಾಜಕಾರಣ, ಕಲೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತುಂಬಲÁರದ ನಷ್ಟವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಡಿ.ಎನ್.ಯೋಗೀಶ್ವರಪ್ಪ ಬೆಂಗಳೂರಿಗೆ ಐ.ಟಿ.ಬಿ.ಟಿ. ಕಂಪನಿಗಳನ್ನು ತರುವ ಮೂಲಕ ನವ ಬೆಂಗಳೂರು ನಿರ್ಮಾಪಕರೆನಿಸಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಜೊತೆ ಒಡನಾಟ ಹೊಂದಿದ್ದ ಇವರು 2002ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತುಮಕೂರಿನಲ್ಲಿ ನಡೆದಾಗ ಅದರ ಉದ್ಘಾಟನೆ ನೆರವೇರಿಸಿ ಪ್ರಸ್ತುತ ಕನ್ನಡ ಭವನಕ್ಕೆ ಶಿಲಾನ್ಯಾಸವನ್ನು ಮಾಡಿದುದನ್ನು ಸ್ಮರಿಸಿದ ಅವರು ಆ ಸಮ್ಮೇಳನಕ್ಕೆ 50 ಲಕ್ಷ ರೂಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಿ ಸಾಹಿತ್ಯದ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ ಎಂದರು.
ನಿವೃತ್ತ ಪ್ರಾಂಶುಪಾಲರಾದ ಡಾ. ಟಿ.ಆರ್.ಲೀಲಾವತಿ ಮಾತನಾಡಿ ಅಜಾತಶತ್ರುವಾಗಿದ್ದ ಎಸ್.ಎಂ.ಕೃಷ್ಣರವರು ಭಾರತದ ವಿದೇಶಾಂಗ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸಿದವರು. ಕರ್ನಾಟಕದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆಯನ್ನು ಜಾರಿಗೊಳಿಸಿದ ಶ್ರೇಷ್ಠ ರಾಜಕಾರಣಿ ಎಂದರು.
ನಿವತ್ತ ಇತಿಹಾಸಕಾರವ ಡಾ. ಸಿದ್ದಲಿಂಗಯ್ಯನವರು ಮಾತನಾಡಿ ಸೋಮನಹಳ್ಳಿ ಎಂಬ ಕುಗ್ರಾಮದಲ್ಲಿ ಜನಿಸಿ ಅಧಿಕಾರದ ಎಲ್ಲ ಮಜಲುಗಳ ಅನುಭವ ಪಡೆದುಕೊಂಡಿದ್ದ ಎಸ್.ಎಂ.ಕೃಷ್ಣರವರು ರಾಜಕಾರಣದ ಅನಭಿಶಕ್ತ ದೊರೆಯಂತಿದ್ದು ಎಲ್ಲ ಪಕ್ಷಗಳ ನಾಯಕರಿಗೆ ಪ್ರೀತಿಪಾತ್ರರಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ಕೋಶಾಧ್ಯಕ್ಷ ಎಂ.ಹೆಚ್.ನಾಗರಾಜು, ಬೆಸ್ಟೆಕ್ಸ್ ರಾಮರಾಜು, ಜಿ.ಹೆಚ್.ಮಹದೇವಪ್ಪ, ನಟರಾಜು, ಚಾಂದು ಇತರರಿದ್ದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ಏರ್ಪಡಿಸಿದ್ದ ಎಸ್.ಎಂ.ಕೃಷ್ಣರವರ ನುಡಿನಮನ ಕಾರ್ಯಕ್ರಮದಲ್ಲಿ ಕೆ.ಎಸ್.ಸಿದ್ದಲಿಂಗಪ್ಪ ಕೃಷ್ಣರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಚಿತ್ರದಲ್ಲಿ ಡಾ. ಡಿ.ಎನ್.ಯೋಗೀಶ್ವರಪ್ಪ, ಎಂ.ಹೆಚ್.ನಾಗರಾಜು, ಚಿಕ್ಕಬೆಳ್ಳಾವಿ ಶಿವಕುಮಾರ್, ಜಿ.ಹೆಚ್.ಮಹದೇವಪ್ಪ, ಡಾ. ಟಿ.ಆರ್.ಲೀಲಾವತಿ, ಹನುಮಂತಪ್ಪ, ಚಾಂದು, ಪಾಂಡುರಂಗಯ್ಯ, ರಾಮರಾಜು ಇತರರು.