ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ವಿವಿಧ ನಿಗಮಗಳ ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾಕಲ್ಯಾಣ, ಸ್ವಾವಲಂಬಿ ಸಾರಥಿ ಯೋಜನೆ, ವಿಭೂತಿ ಘಟಕ, ಬೋಜನಾಲಯ ಕೇಂದ್ರ ಹಾಗೂ ಮಿಲ್ಟಿ ಹೋಟೆಲ್ ಯೋಜನೆಗಳಡಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ. ಪ್ರಭು ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಫಲಾನುಭವಿಗಳ ಆಯ್ಕೆ ಸಮಿತಿ ಸಭೆಯಲ್ಲಿ ಅರ್ಜಿದಾರರ ಸಮ್ಮುಖದಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ 2024-25ನೇ ಸಾಲಿಗಾಗಿ ವಿವಿಧ ಯೋಜನೆಗಳಡಿ ಫಲಾನುಭವಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ ಪಾರದರ್ಶಕವಾಗಿ ಅರ್ಹರನ್ನು ಆಯ್ಕೆ ಮಾಡಲಾಯಿತು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಸ್ವೀಕೃತಗೊಂಡ 247 ಅರ್ಜಿಗಳ ಪೈಕಿ 22, ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಸ್ವೀಕೃತಗೊಂಡ 1,420 ಅರ್ಜಿಗಳ ಪೈಕಿ 19, ಕರ್ನಾಟಕ ವೀರಶೈವ ಲಿಂಗಾಯತ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಸ್ವೀಕೃತಗೊಂಡ 825 ಅರ್ಜಿಗಳಲ್ಲಿ 23, ಕರ್ನಾಟಕ ಉಪ್ಪಾರ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಸ್ವೀಕೃತಗೊಂಡ 819 ಅರ್ಜಿಗಳ ಪೈಕಿ 9 ಫಲಾನುಭವಿಗಳ ಅರ್ಜಿಯನ್ನು ಆಯ್ಕೆ ಮಾಡಲಾಯಿತು.
ಅದೇ ರೀತಿ ಕರ್ನಾಟಕ ಅಲೆಮಾರಿ/ಅರೆಅಲೆಮಾರಿ ಅಭಿವೃದ್ಧಿ ನಿಗಮದಲ್ಲಿ ಸ್ವೀಕೃತಗೊಂಡ 3,555 ಅರ್ಜಿಗಳ ಪೈಕಿ 20, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಲ್ಲಿ ಸ್ವೀಕೃತಗೊಂಡ 308 ಅರ್ಜಿಗಳ ಪೈಕಿ 13, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಲ್ಲಿ ಸ್ವೀಕೃತಗೊಂಡ 983 ಅರ್ಜಿಗಳ ಪೈಕಿ 18, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ ಸ್ವೀಕೃತಗೊಂಡ 361 ಅರ್ಜಿಗಳ ಪೈಕಿ 10, ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಸ್ವೀಕೃತಗೊಂಡ 120 ಅರ್ಜಿಗಳಲ್ಲಿ 40, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಸ್ವೀಕೃತಗೊಂಡ 100 ಅರ್ಜಿಗಳ ಪೈಕಿ 28 ಫಲಾನುಭವಿಗಳ ಅರ್ಜಿಯನ್ನು ಆಯ್ಕೆ ಮಾಡಲಾಯಿತು. ಒಟ್ಟಾರೆ 8,38 ಅರ್ಜಿದಾರರದಲ್ಲಿ 202 ಫಲಾನುಭವಿಗಳನ್ನು ಆಯ್ಕೆ ಮಾಡಿ ಆಯ್ಕೆಯಾದವರಿಗೆ 405.15 ಲಕ್ಷ ರೂ.ಗಳ ಆರ್ಥಿಕ ಸೌಲಭ್ಯವನ್ನು ಮಂಜೂರು ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ವೆಂಕಟರಾಜು ಬಿ.ವಿ ಹಾಜರಿದ್ದರು.