ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗ ಮಾಡುವುದಕ್ಕಿಂತ ಸ್ವಂತ ಉದ್ಯಮವನ್ನು ಆರಂಭಿಸುವುದಕ್ಕೆ ಚಿಂತನೆ ಮಾಡಿ ಎಂದು ಸಾಹೇ ವಿಶ್ವ ವಿದ್ಯಾನಿಲಯದ ಕುಲಸಚಿವರಾದ ಡಾ.ಎಂ.ಝಡ್. ಕುರಿಯನ್ ಅವರು ಕರೆ ನೀಡಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾನಿಲಯ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ಸೇತುಬಂಧ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಕೇವಲ ಉದ್ಯೋಗವನ್ನು ಧಕ್ಕಿಸಿಕೊಳ್ಳುವುದಷ್ಟೇ ಅಲ್ಲ, ಆದಷ್ಟು ಬೇಗ ಸ್ವಂತ ಉದ್ಯಮವನ್ನು ಆರಂಭಿಸಬೇಕು. ಆಗ ಮಾತ್ರ ಅವರ ಜೀವನ ಸುಂದರವಾಗಿರುತ್ತದೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿದ್ದ ಟೈಟಾನ್ ಕಂಪನಿಯ ಮ್ಯಾನೇಜಿಂಗ್ ಟೈರೆಕ್ಟ್ರ್ ಪ್ರಸಾದ್ ಡಿ.ಎಲ್. ಮಾತನಾಡಿ ನಾವು ಮಾಡುತ್ತಿರುವ ಕೆಲಸಗಳಲ್ಲಿ ಅಡ್ಡಿ ಆತಂಕಗಳು ಬಂದೇ ಬರುತ್ತವೆ. ಇದೆಲ್ಲವನ್ನು ಸರಿ ಪಡಿಸಿಕೊಂಡು ಮುಂದೆ ಹೋದಾಗ ಮಾತ್ರ ನಾವು ಯಶಸ್ಸನ್ನು ಪಡೆಯುತ್ತೇವೆ ಎಂದು ಹೇಳಿದರು.
ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ನಂಜುಂಡಪ್ಪ ನವರು ಮಾತನಾಡಿ, ಮನುಷ್ಯನನ್ನು ಮಾನವರನ್ನಾಗಿ ಮಾಡುವುದಕ್ಕೆ ಶಿಕ್ಷಣ ತುಂಬಾ ಅತ್ಯಗತ್ಯವಾಗಿದೆ. ಇಂದಿನ ದಿನಗಳಲ್ಲಿ ವೃತ್ತಿಪರ ಶಿಕ್ಷಣದಿಂದ ಉದ್ಯೋಗ ದೊರೆಯುತ್ತದೆ. ಆದರೆ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಹೃದಯವಂತಿಕೆಯ ಶಿಕ್ಷಣ. ಇದು ಕೇವಲ ಸಾಹಿತ್ಯದ ಅಧ್ಯಯನದಿಂದ ಮಾತ್ರ ಗಳಿಸಲು ಸಾಧ್ಯ. ಸಾಹಿತ್ಯದ ಶಿಕ್ಷಣವನ್ನು ಪಡೆಯದೇ ಹೋದರೆ ನಾವು ಮನುಷ್ಯರಾಗಿ ಜನಿಸಿದ್ದೇ ವ್ಯರ್ಥ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎಸ್ ರವಿಪ್ರಕಾಶ್ ಮಾತನಾಡಿ, ಸೇತುಬಂಧ ಕಾರ್ಯಕ್ರಮ ಹಳೇ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಂಬಂಧವನ್ನು ವೃದ್ಧಿಸುವುದಾಗಿದೆ. ಕಾಲೇಜಿನಲ್ಲಿ ಅತೀ ಹೆಚ್ಚಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅಧ್ಯಯನವನ್ನು ಮಾಡುತ್ತಿದ್ದಾರೆ. ಇವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಂಸ್ಥೆಯಿಂದ ಹಲವು ಶೈಕ್ಷಣಿಕ ಅನುಕೂಲಗಳನ್ನು ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.
ವಿವಿಧ ವಿಭಾಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಲೇಜಿನ ವತಿಯಿಂದ ಹಳೆÉೀ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಸ್ಎಸ್ಐಟಿ ಕಾಲೇಜಿನ ವಿಶ್ರಾಂತ ಆಡಳಿತಾಧಿಕಾರಿಗಳಾದ ಡಾ. ವೈ.ಎಂ.ರೆಡ್ಡಿ, ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ.ವೀರಯ್ಯ, ಅಕಾಡೆಮಿ ಡೀನ್ ಡಾ. ರೇಣುಕಲತಾ ಎಸ್, ಹಳೇ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರಾದ ಡಾ. ವಿ ರವಿರಾಮ್, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಡಾ. ಎಸ್.ಎಚ್ ಡಾ. ಜೀವಿತ, ಜಿ.ಎಲ್.ಸ್ವರ್ಣಲತಾ ಮತ್ತು ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಕಾಲೇಜಿನ ಹಳೇ ವಿದ್ಯಾರ್ಥಿಗಳು ಹಾಜರಿದ್ದರು.