ವೈದ್ಯಕೀಯ ಕ್ಷೇತ್ರದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನವನ್ನು ಉಪಯುಕ್ತವಾಗಿ ಬಳಸಿಕೊಂಡಾಗ ಗ್ರಾಮೀಣ ಪ್ರದೇಶಗಳಿಗೂ ಆರೋಗ್ಯ ಸೌಲಭ್ಯವನ್ನು ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ರಾಜ್ಯ ಸರ್ಕಾರದ ಗೃಹಸಚಿವರು ಹಾಗೂ ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಸವ್ಯಸಾಚಿ ಡಾ. ಜಿ ಪರಮೇಶ್ವರ ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ “ಎಸ್ಎಸ್ಎಂಸಿ ಕಾನ್ – 2024” ಇನೋವೇಷನ್ ಇನ್ ಟೆಲಿಮೆಡಿಸನ್ ಆಂಡ್ ರಿಮೋಟ್ ಹೆಲ್ತ್ ಕೇರ್ ಎಂಬ ವಿಷಯದ ಕುರಿತು ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತವು ಬಹುದೊಡ್ಡ ಜನಸಂಖ್ಯೆಗೆ ಆರೋಗ್ಯ ಸೌಲಭ್ಯವನ್ನು ನೀಡುತ್ತಿದ್ದರೂ ಕೂಡ ಗ್ರಾಮೀಣ ಭಾಗಗಳಿಗೆ ಆರೋಗ್ಯ ಸೌಲಭ್ಯಗಳು ದೊರೆಯುತ್ತಿಲ್ಲ ಹಾಗಾಗಿ ಟೆಲಿ ಮೆಡಿಸನ್ ಅನ್ನು ಉಪಯುಕ್ತವಾಗಿ ಉಪಯೋಗಿಸಿಕೊಂಡರೆ ಪ್ರತಿಯೊಂದು ಪ್ರದೇಶಕ್ಕೂ ಆರೋಗ್ಯ ಸೌಲಭ್ಯವನ್ನು ನೀಡಬಹುದಾಗಿದೆ. ಬದಲಾಗುತ್ತಿರುವ ತಂತ್ರಜ್ಞಾನವನ್ನು ವೈದ್ಯರು ಕಲಿತು ವೈದ್ಯಕೀಯ ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದು ಹೇಳಿದರು.
ವಿಚಾರ ಸಂಕಿರಣದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಯದೇವ ಹೃದ್ರೋಗ ಹಾಗೂ ಸಂಶೋಧನಾ ಸಂಸ್ಥೆ ನಿದೇಶಕರಾದ ಡಾ. ಕೆ.ಎಸ್ ರವೀಂದ್ರನಾಥ್ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳದೇ ಹೋದರೆ ಬಹಳ ತೊಂದರೆಯಾಗುತ್ತದೆ. ಯಾವ ಪ್ರದೇಶಗಳಿಗೆ ಆರೋಗ್ಯ ಸೌಲಭ್ಯಗಳು ಮುಟ್ಟುತ್ತಿಲ್ಲವೋ ಅಂತಹ ಪ್ರದೇಶಗಳಿಗೆ ಟೆಲಿಮೆಡಿಸಿನ್ ಮೂಲಕ ಆರೋಗ್ಯ ಸೌಲಭ್ಯವನ್ನು ಮುಟ್ಟಿಸಬಹುದು ಎಂದರು.
ವೈದ್ಯರು ಮಾನವೀಯ ಮೌಲ್ಯಗಳನ್ನು ಹೊಂದಿರಬೇಕು, ರೋಗಿಗಳ ಬಗ್ಗೆ ಅನುಕಂಪ ಅಂತಃಕರಣವಿರಬೇಕು, ವೈದ್ಯರು ಹಾಗೂ ರೋಗಿಗಳ ಬಗ್ಗೆ ಉತ್ತಮ ಸಂಬಂಧವಿರಬೇಕು, ಈ ಸಂಬಂಧದ ಪಾವಿತ್ರತೆಗೆ ಧಕ್ಕೆಯಾಗಬಾರದು, ವೈದ್ಯಕೀಯ ರಂಗ ವ್ಯಾಪಾರೀಕರಣವಾಗದಂತೆ ರೋಗಿಯ ಆರ್ಥಿಕತೆಯ ಹಿನ್ನಲೆಯನ್ನು ತಿಳಿದುಕೊಂಡು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಬೇಕು, ಹಾಗ ಮಾತ್ರ ವೈದ್ಯ ವೃತ್ತಿಗೆ ಅರ್ಥ ಬರುತ್ತದೆ ಎಂದು ಅವರು ವೈದ್ಯರಿಗೆ ಸಲಹೆ ನೀಡಿದರು.
ವಿಚಾರ ಸಂಕಿರಣದಲ್ಲಿ ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ.ಬಿ ಲಿಂಗೇಗೌಡ, ಸಾಹೇ ವಿ.ವಿ ಯ ಕುಲಸಚಿವರಾದ ಡಾ.ಎಂ.ಝಡ್ ಕುರಿಯನ್, ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಬಿ ಸಾಣೆಕೊಪ್ಪ, ವೈದ್ಯಕೀಯ ಮೇಲ್ವಿಚಾರಕರಾದ ಡಾ. ವೆಂಕಟೇಶ್ ಹಾಗೂ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.